ಮೋದಿ, ಶಾ... ನಿಮ್ಮ ಸಚಿವರು ಶರದ್ ಪವಾರ್ ರನ್ನು ಬೆದರಿಸುತ್ತಿದ್ದಾರೆ: ಸಂಜಯ್ ರಾವತ್ ಕಿಡಿ

Update: 2022-06-24 09:42 GMT

ಮುಂಬೈ: ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಸಚಿವರೊಬ್ಬರು ಬೆದರಿಸಿದ್ದಾರೆ ಎಂದು ಆರೋಪಿಸಿರುವ ಶಿವಸೇನೆಯ ವಕ್ತಾರ ಸಂಜಯ್ ರಾವತ್ ಈ ಕುರಿತು ಬಿಜೆಪಿ ಹಾಗೂ ಪ್ರಧಾನಿ ಮತ್ತು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.

"ಅವರು ಮಹಾರಾಷ್ಟ್ರದ ಪುತ್ರ. ಅವರನ್ನು ಬೆದರಿಸಲಾಗಿದೆ. ಮೋದೀ ಜಿ, ಅಮಿತ್ ಶಾ ನಿಮಗೆ ಕೇಳಿಸುತ್ತಿದೆಯೇ? ನಿಮ್ಮ ಸಚಿವರು ಶರದ್ ಪವಾರ್ ಅವರನ್ನು ಬೆದರಿಸುತ್ತಿದ್ದಾರೆ. ಇಂತಹ ಬೆದರಿಕೆಗಳನ್ನು ನೀವು ಬೆಂಬಲಿಸುತ್ತೀರಾ? ಮಹಾರಾಷ್ಟ್ರಗೆ ಉತ್ತರ ಬೇಕಿದೆ" ಎಂದು ರಾವತ್ ಹೇಳಿದ್ದಾರೆ.

ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಗುರುವಾರ ಸಂಜೆ ಮಾಡಿದ ಟ್ವೀಟ್ ಹಿನ್ನೆಲೆಯಲ್ಲಿ ರಾವತ್ ಹೇಳಿಕೆ ಬಂದಿದೆ.

"ಶರದ್ ಪವಾರ್ ಅವರು ಶಾಸಕರನ್ನು (ಬಂಡುಕೋರರು) ಬೆದರಿಸುತ್ತಿದ್ದಾರೆ ಹಾಗೂ ಅವರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಬರುವಂತೆ ಹೇಳುತ್ತಿದ್ದಾರೆ. ಅವರು ಖಂಡಿತಾ ಬರುತ್ತಾರೆ ಮತ್ತು ತಮ್ಮಿಚ್ಛೆಯಂತೆಯೇ ಮತ ಹಾಕುತ್ತಾರೆ. ಅವರಿಗೇನಾದರೂ ತೊಂದರೆಯಾದರೆ, ಮನೆಗೆ ಹೋಗಲು ಕಷ್ಟವಾಗಬಹುದು" ಎಂದು ರಾಣೆ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಾವತ್ "ಶರದ್ ಪವಾರ್ ಅವರು ಮಹಾ ವಿಕಾಸ್ ಅಘಾಡಿ ಸರಕಾರವನ್ನು ಉಳಿಸಲು ಯತ್ನಿಸಿದರೆ ಅವರಿಗೆ ಮನೆಗೆ ಹೋಗಲು ಸಾಧ್ಯವಿಲ್ಲ, ಅವರನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುವುದು ಎಂದು ಒಬ್ಬ ಕೇಂದ್ರ ಸಚಿವರು ಬೆದರಿಸಿದ್ದಾರೆ. ಬಿಜೆಪಿ ಇದನ್ನು ಮಾಡುತ್ತಿದೆಯಾದರೆ ಅದನ್ನು ಘೋಷಿಸಿಕೊಳ್ಳಲಿ ಸರಕಾರ ಉಳಿಯಲಿ ಅಥವಾ ಹೋಗಲಿ, ಶರದ್ ಪವಾರ್ ಅವರ ಕುರಿತು ಇಂತಹ ಭಾಷೆ ಅಸ್ವೀಕಾರಾರ್ಹ" ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News