ಜುಲೈ 1 ರಿಂದ ಹೊಸ ಕಾರ್ಮಿಕ ನಿಯಮಗಳು; ಕೈಗೆ ದೊರೆಯುವ ವೇತನ ಕಡಿತ, ಪಿಎಫ್ ಕೊಡುಗೆ, ಕೆಲಸದ ಅವಧಿ ಹೆಚ್ಚಳ

Update: 2022-06-24 12:17 GMT

ಹೊಸದಿಲ್ಲಿ: ಜುಲೈ 1 ರಿಂದ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಕಾರ್ಮಿಕ ಕಾನೂನುಗಳು ಉದ್ಯೋಗಿಗಳ ಕೈಗೆ ಸಿಗುವ ವೇತನ ಅವರ ಉದ್ಯೋಗಿ ಭವಿಷ್ಯನಿಧಿ ಮತ್ತು ಕೆಲಸದ ಗಂಟೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ.

ಹೊಸ ವೇತನ ನಿಯಮಗಳು ಹಲವಾರು ಮಾರ್ಪಾಟುಗಳನ್ನು ಸೂಚಿಸಿವೆ. ಇದರಿಂದ ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಳವಾಗುವುದರ ಜೊತೆಗೆ ಪಿಎಫ್ ಕೊಡುಗೆ ಹೆಚ್ಚಳವಾಗಲಿದ್ದು ಇದರಿಂದ ಅವರ ಕೈಗೆ ಅಂತಿಮವಾಗಿ ದೊರೆಯುವ ವೇತನ ಕಡಿಮೆಯಾಗಲಿದೆ.

ಆದರೆ ಈ ಹೊಸ ಕಾರ್ಮಿಕ ಸಂಹಿತೆಗೆ ಸಂಬಂಧಿಸಿದಂತೆ ನಿಯಮಗಳನ್ನು ಕೆಲ ರಾಜ್ಯಗಳು ಇನ್ನಷ್ಟೇ ರೂಪಿಸಬೇಕಿದೆ. ವೇತನ ಸಂಹಿತೆಗೆ ಸಂಬಂಧಿಸಿದಂತೆ ಇಲ್ಲಿಯ ತನಕ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರಡು ನಿಯಮಗಳನ್ನು ಪ್ರಕಟಿಸಿವೆ ಎಂದು ಕೇಂದ್ರ ಕಾನೂನು ಮತ್ತು ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ತೇಲಿ ತಿಳಿಸಿದ್ದಾರೆ.

ಈ ಹೊಸ ಕಾನೂನಿನ ಪ್ರಕಾರ ಕಂಪೆನಿಗಳು ತಮ್ಮ ಉದ್ಯೋಗಿಗಳ ಕೆಲಸದ ಅವಧಿಯನ್ನು ಈಗಿನ 8-9 ಗಂಟೆಗಳ ಬದಲು 12 ಗಂಟೆಗಳಿಗೆ ಏರಿಕೆ ಮಾಡಬಹುದು. ಆದರೆ ಉದ್ಯೋಗಿಗಳಿಗೆ ವಾರಕ್ಕೆ ಮೂರು ರಜೆಗಳನ್ನು ನೀಡಬೇಕಿದೆ. ಈ ಹೊಸ ಸಂಹಿತೆಯ ಪ್ರಕಾರ ವಾರಕ್ಕೆ ಒಟ್ಟು ಕೆಲಸದ ಅವಧಿ 48 ಗಂಟೆಗಳಾಗಿವೆ.

ಈ ಸಂಹಿತೆಯನ್ವಯ ಉದ್ಯೋಗಿಗಳ ಮೂಲ ವೇತನವು ಒಟ್ಟು ಮಾಸಿಕ ವೇತನದ ಕನಿಷ್ಠ ಶೇ 50ರಷ್ಟಾಗಿರುತ್ತದೆ. ಇದರಿಂದ ಉದ್ಯೋಗಿಗಳು ಮತ್ತು ಉದ್ಯೋಗದಾತರು ಮಾಡುವ ಪಿಎಫ್ ಕೊಡುಗೆಗಳು ಏರಿಕೆಯಾಗಲಿವೆ.

ಇದರಿಂದ ಪ್ರಮುಖವಾಗಿ ಖಾಸಗಿ ರಂಗದಲ್ಲಿ ದುಡಿಯುವ ಉದ್ಯೋಗಿಗಳ ಕೈಗೆ ಅಂತಿಮವಾಗಿ ಸಿಗುವ ವೇತನದ ಮೊತ್ತ ಕಡಿಮೆಯಾಗಲಿದೆ. ಆದರೆ ಈ ಹೊಸ ಕಾರ್ಮಿಕ ಕಾನೂನುಗಳನ್ವು ನಿವೃತ್ತಿ ನಂತರ ದೊರೆಯುವ ಗ್ರಾಚುವಿಟಿ ಮತ್ತಿತರ ಮೊತ್ತ ಏರಿಕೆಯಾಗಲಿದೆ.

ಈ ಹೊಸ ನಿಯಮಗಳಿಗೆ ಸಂಸತ್ತು ಅನುಮೋದನೆ ನೀಡಿದ್ದರೂ ಕಾರ್ಮಿಕ ಸಂಬಂಧಿ ವಿಚಾರಗಳು ಸಂವಿಧಾನದ ಕನ್ಕರೆಂಟ್ ಪಟ್ಟಿಯಲ್ಲಿ ಬರುವುದರಿಂದ ಹೊಸ ಸಂಹಿತೆ ಕುರಿತಂತೆ ರಾಜ್ಯಗಳು ನಿಯಮಗಳ ಕುರಿತಂತೆ ಅಧಿಸೂಚನೆ ಹೊರಡಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News