ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ದಮನ ಕುರಿತು ನಿರ್ಣಯ ಮಂಡಿಸಿದ ಅಮೆರಿಕಾ ಸಂಸದೆ ಇಲ್ಹಾನ್‌ ಉಮರ್‌ ಗೆ IAMC ಶ್ಲಾಘನೆ

Update: 2022-06-24 12:20 GMT

 ವಾಷಿಂಗ್ಟನ್: ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ ಪ್ರಕರಣಗಳನ್ನು ಖಂಡಿಸಿ ನಿರ್ಣಯ ಮಂಡಿಸಿದ ಅಮೆರಿಕಾದ ಕಾಂಗ್ರೆಸ್ ಸಂಸದೆ ಇಲ್ಹಾನ್ ಉಮರ್  ಅವರನ್ನು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಶ್ಲಾಘಿಸಿದೆ.

ಅಮೆರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗದ ಶಿಫಾರಸುಗಳನ್ವಯ ಭಾರತವನ್ನು ಕಂಟ್ರಿ ಆಫ್ ಪರ್ಟಿಕ್ಯುಲರ್ ಕನ್ಸರ್ನ್ (ನಿರ್ದಿಷ್ಟ ಕಳವಳ ಮೂಡಿಸುವ ದೇಶ) ಎಂದು ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ವಯ ಘೋಷಿಸಬೇಕೆಂದು ಈ ನಿರ್ಣಯ ಮಂಡನೆಯಲ್ಲಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ಇಲ್ಹಾನ್ ಅವರೊಂದಿಗೆ ಕಾಂಗ್ರೆಸ್ ಸದಸ್ಯೆಯರಾದ ರಶೀದಾ ತಾಲಿಬ್ ಮತ್ತು ಜುವಾನ ವರ್ಗಸ್ ಜೊತೆಗೂಡಿದ್ದಾರೆ.

ಭಾರತದಲ್ಲಿ  ಧಾರ್ಮಿಕ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದೇಶವನ್ನು ಕಂಟ್ರಿ ಆಫ್ ಪರ್ಟಿಕ್ಯುಲರ್ ಕನ್ಸರ್ನ್ ಎಂದು ಗುರುತಿಸುವಂತೆ ಅಮೆರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ ತನ್ನ ವಾರ್ಷಿಕ ವರದಿ 2022ರಲ್ಲಿ ಶಿಫಾರಸು ಮಾಡಿತ್ತು.

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿರುವ ರೀತಿಯ ಕುರಿತಂತೆ ತನ್ನ ಗಂಭೀರ ಕಳವಳವನ್ನು ಸದನ ವ್ಯಕ್ತಪಡಿಸಬೇಕೆಂದೂ ನಿರ್ಣಯ ಮಂಡನೆಯಲ್ಲಿ ಆಗ್ರಹಿಸಲಾಗಿದೆ.

ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಮಂಡಿಸಿದ ಈ ನಿರ್ಣಯಕ್ಕೆ ನಾವು ಆಭಾರಿಯಾಗಿದ್ದೇವೆ ಹಾಗೂ ಇತರ ಕಾಂಗ್ರೆಸ್ ಸದಸ್ಯರು ಇದನ್ನು ಬೆಂಬಲಿಸಿ ಭಾರತದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರು ಸೇರಿದಂತೆ  ಎಲ್ಲರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಅಧ್ಯಕ್ಷ ಸಯೀದ್ ಅಫ್ಝಲ್ ಆಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News