ಕೇಂದ್ರ ಗುಪ್ತಚರ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ತಪನ್ ದೇಕಾ ನೇಮಕ

Update: 2022-06-24 16:29 GMT
Photo: Ndtv.com

ಹೊಸದಿಲ್ಲಿ: ಇಂಟೆಲಿಜೆನ್ಸ್ ಬ್ಯೂರೋ (ಐಬಿ) ವಿಶೇಷ ನಿರ್ದೇಶಕ ತಪನ್ ದೇಕಾ ಅವರನ್ನು ಕೇಂದ್ರ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅರವಿಂದ್ ಕುಮಾರ್ ಅವರ ಅಧಿಕಾರಾವಧಿ ಜೂನ್ 30 ರಂದು ಕೊನೆಗೊಳ್ಳಲಿದ್ದು, ಅದರ ಬಳಿಕ ತಪನ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಮಧ್ಯೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ಆರ್&ಎಡಬ್ಲ್ಯು) ಪ್ರಸ್ತುತ ಮುಖ್ಯಸ್ಥ ಸಮಂತ್ ಗೋಯೆಲ್ ಅವರ ಅಧಿಕಾರಾವಧಿಯಲ್ಲಿ ಮತ್ತೊಂದು ವರ್ಷದ ವಿಸ್ತರಣೆಯನ್ನು ನೀಡಲಾಗಿದೆ. ಅವರ ಅಧಿಕಾರಾವಧಿಯು ಜೂನ್‌ 30 ಕ್ಕೆ ಕೊನೆಗೊಳ್ಳಬೇಕಾಗಿತ್ತು.

ಪಂಜಾಬ್‌ನ ಮಾಜಿ ಡಿಜಿಪಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹೊಸ ಮುಖ್ಯಸ್ಥರನ್ನಾಗಿ ಮತ್ತು ಐಬಿ ವಿಶೇಷ ನಿರ್ದೇಶಕ ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ಕೇಂದ್ರವು ಗುರುವಾರ ನೇಮಿಸಿದೆ.

1988ರ ಬ್ಯಾಚ್‌ನ ಹಿಮಾಚಲ ಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ದೇಕಾ ಅವರು ಎರಡು ವರ್ಷಗಳ ಅವಧಿಗೆ  ಕೇಂದ್ರ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಾಗಿರಲಿದ್ದಾರೆ ಎಂದು thenewindianexpress ವರದಿ ಮಾಡಿದೆ.  

ಸದ್ಯ, ಇಂಟೆಲಿಜೆನ್ಸ್ ಬ್ಯೂರೋದ ಕಾರ್ಯಾಚರಣೆ ವಿಭಾಗವನ್ನು ನಿರ್ವಹಿಸುತ್ತಿರುವ ದೇಕಾ, ಭಯೋತ್ಪಾದನೆ ನಿಗ್ರಹದಲ್ಲಿ ದಶಕಗಳ ಅನುಭವವನ್ನು ಹೊಂದಿದ್ದಾರೆ. ಇಂಡಿಯನ್ ಮುಜಾಹಿದೀನ್ (IM) ದೇಶದಲ್ಲಿ ತನ್ನ ವಿಧ್ವಂಸಕ ಚಟುವಟಿಕೆಗಳ ಉತ್ತುಂಗದಲ್ಲಿದ್ದಾಗ ಅವರು ಅದರ ವಿರುದ್ಧದ ಕಾರ್ಯಾಚರಣೆಗಳ ಜಂಟಿ ನಿರ್ದೇಶಕರಾಗಿದ್ದರು 

2015-16ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019ರ ಪುಲ್ವಾಮಾ ದಾಳಿಯ ಸಂದರ್ಭದಲ್ಲಿಯೂ ದೇಕಾ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News