ಮಾನಸಿಕ, ದೈಹಿಕ ಅಸ್ವಸ್ಥ ಬಾಲಕಿಯ ಅತ್ಯಾಚಾರ, ಕೊಲೆ: ಅಪರಾಧಿಯ ಮರಣದಂಡನೆ ಎತ್ತಿಹಿಡಿದ ಸುಪ್ರೀಂಕೋರ್ಟ್

Update: 2022-06-24 18:44 GMT

ಹೊಸದಿಲ್ಲಿ: ಮಾನಸಿಕ ಮತ್ತು ದೈಹಿಕ ಅಸ್ವಸ್ಥ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ವ್ಯಕ್ತಿಯ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ ಎಂದು livelaw.com ವರದಿ ಮಾಡಿದೆ.

2013 ರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 37 ವರ್ಷದ ವ್ಯಕ್ತಿ, ತನಗೆ ಮರಣದಂಡನೆ ವಿಧಿಸಿದ ರಾಜಸ್ಥಾನ ಹೈಕೋರ್ಟ್‌ನ ಮೇ 2015 ರ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ನ್ಯಾಯಮೂರ್ತಿಗಳಾದ ಎಎಮ್ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರ ತ್ರಿಸದಸ್ಯ ಪೀಠವು "ದುರ್ಬಲ ಸ್ಥಿತಿಯ ಏಳು ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ ರೀತಿಯು "ಅತ್ಯಂತ ಅಧಃಪತನ" ಎಂದು ಅಭಿಪ್ರಾಯಪಟ್ಟಿದೆ ಎಂದು ಲೈವ್‌ ಲಾ ವರದಿ ಮಾಡಿದೆ.

ತನ್ನ ಮೇಲ್ಮನವಿಯಲ್ಲಿ, ಶಿಕ್ಷೆಗೊಳಗಾದ ವ್ಯಕ್ತಿಯು, ತನ್ನ ವಿರುದ್ಧದ ಪ್ರಕರಣವು ಸಾಂದರ್ಭಿಕ ಸಾಕ್ಷ್ಯವನ್ನು ಆಧರಿಸಿದ್ದು, ತನ್ನನ್ನು ತಪ್ಪಾಗಿ ಪ್ರಕರಣಕ್ಕೆ ಸಿಲುಕಿಸಲಾಗಿದೆ ಎಂದು ವಾದಿಸಿದ್ದರು. ಆ ವ್ಯಕ್ತಿಗೆ " ಅನುಮಾನದ ಪ್ರಯೋಜನ" ನೀಡಬೇಕು ಮತ್ತು ಮರಣದಂಡನೆ ವಿಧಿಸಬಾರದು ಎಂದು ಅವರ ವಕೀಲರು ವಾದಿಸಿದ್ದರು‌ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
 
ಆದರೆ, ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವ ಮೊದಲು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದು, ಜೈಲು ಪಾಲಾದ ನಂತರವೂ ಆತನ ನಡವಳಿಕೆ ಬದಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗುವ ಮೊದಲು, ವ್ಯಕ್ತಿಯ ವಿರುದ್ಧ ಸಾರ್ವಜನಿಕ ಆಸ್ತಿ ನಾಶ, ಕಳ್ಳತನ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಕನಿಷ್ಠ ನಾಲ್ಕು ಪ್ರಕರಣಗಳಿದ್ದವು. ಪ್ರಸ್ತುತ ಪ್ರಕರಣದಲ್ಲಿಯೂ ಆತ ಕದ್ದ ಮೋಟಾರು ಸೈಕಲ್‌ನಲ್ಲಿ ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ನ್ಯಾಯಾಧೀಶರು ಗಮನಿಸಿದ್ದಾರೆ.

 
ಮರಣದಂಡನೆಯನ್ನು ಎತ್ತಿಹಿಡಿಯುವ ತನ್ನ ಆದೇಶವನ್ನು ಸಮರ್ಥಿಸುತ್ತಾ, ನ್ಯಾಯಾಲಯವು ಆ ವ್ಯಕ್ತಿ "ಸಮಾಜದಲ್ಲಿ ಸುವ್ಯವಸ್ಥೆಯ ನಿರ್ವಹಣೆಗೆ ಅಪಾಯವಾಗಿದೆ" ಮತ್ತು ಆತ ಸುಧಾರಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News