ಗರ್ಭಪಾತದ ಹಕ್ಕು ರದ್ದುಪಡಿಸಿದ ಅಮೆರಿಕ ಸುಪ್ರೀಂಕೋರ್ಟ್

Update: 2022-06-25 03:07 GMT

ವಾಷಿಂಗ್ಟನ್: ಅಮೆರಿಕದಲ್ಲಿ ಸುಮಾರು ಅರ್ಧ ಶತಮಾನದಿಂದ ಜಾರಿಯಲ್ಲಿದ್ದ ಕಾನೂನುಬದ್ಧ ಗರ್ಭಪಾತದ ಹಕ್ಕನ್ನು ರದ್ದುಪಡಿಸುವ ಐತಿಹಾಸಿಕ ತೀರ್ಪನ್ನು ಅಮೆರಿಕ ಸುಪ್ರೀಂಕೋರ್ಟ್ ಗುರುವಾರ ಪ್ರಕಟಿಸಿದೆ. ಕಟ್ಟುನಿಟ್ಟಿನ ಮಿಸಿಸಿಪ್ಪಿ ಗರ್ಭಪಾತ ಕಾನೂನಿನ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‍ನ ಈ ತೀರ್ಪು ಸಂಪ್ರದಾಯವಾದಿ ರಿಪಬ್ಲಿಕನ್ ಆಡಳಿತದ ರಾಜ್ಯಗಳಲ್ಲಿ ಮಹತ್ವದ ಪರಿಣಾಮಗಳನ್ನು ಬೀರಲಿದ್ದು, ಕೆಲ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ತಕ್ಷಣದಿಂದಲೇ ಗರ್ಭಪಾತವನ್ನು ನಿಷೇಧಿಸಲು ಕಾರಣವಾಗಲಿದೆ.

ಸೈದ್ಧಾಂತಿಕ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಬಂದಿದ್ದು, ಸುಪ್ರೀಂಕೋರ್ಟ್‍ನ ಐದು ಮಂದಿ ಪುರುಷ ನ್ಯಾಯಮೂರ್ತಿಗಳು ಸೇರಿದಂತೆ ಆರು ಮಂದಿ ಸಂಪ್ರದಾಯವಾದಿ ನ್ಯಾಯಮೂರ್ತಿಗಳು ತೀರ್ಪಿನ ಪರ ಮತ ಚಲಾಯಿಸಿದ್ದಾರೆ. ಈ ಮೂಲಕ ಗರ್ಭಪಾತದ ಹಕ್ಕಿನ ಸಂವಿಧಾನ ಬದ್ಧತೆ ರದ್ದಾಗಲಿದೆ. ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ಉದಾರವಾದಿ ನ್ಯಾಯಮೂರ್ತಿಗಳು ತೀರ್ಪಿಗೆ ವಿರೋಧ ವ್ಯಕ್ತಪಡಿಸಿದರು.

ತೀರ ಬೇಸರದೊಂದಿಗೆ, ಈ ತೀರ್ಪಿನ ಕಾರಣದಿಂದ ಲಕ್ಷಾಂತರ ಅಮೆರಿಕನ್ ಮಹಿಳೆಯರು ಇಂದು ತಮ್ಮ ಮೂಲಭೂತ ಸಂವಿಧಾನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದ್ದಾರೆ... ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸ್ಟೀಫನ್ ಬ್ರೆಯರ್, ಸೋನಿಯಾ ಸೊಟೊಮೆಯರ್ ಮತ್ತು ಎಲೇನಾ ಕಗಾನ್ ಭಿನ್ನ ಅಭಿಪ್ರಾಯ ದಾಖಲಿಸಿದ್ದಾರೆ.

ಗರ್ಭಪಾತ ಹಕ್ಕುಗಳ ಹೋರಾಟಗಾರರು ಮತ್ತು ಸಂಘಟನೆಗಳು ಸುಪ್ರೀಂಕೋರ್ಟ್‍ನ ತೀರ್ಪು ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಲಿದೆ ಎಂದು ವಿರೋಧ ವ್ಯಕ್ತಪಡಿಸಿವೆ. ಅಮೆರಿಕದ 30 ರಾಜ್ಯಗಳಲ್ಲಿ ವಾಸವಿರುವ ಸುಮಾರು 36 ದಶಲಕ್ಷ ಮಹಿಳೆಯರ ಮೇಲೆ ಈ ತೀರ್ಪು ಪರಿಣಾಮ ಬೀರಲಿದೆ.

ಈ ತೀರ್ಪು ಮಹಿಳೆಯರಿಗೆ ನೀಡಿದ ದೊಡ್ಡ ಹೊಡೆತ ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News