ವಿ.ಪಿ. ಸಿಂಗ್ ಮರೆತುಹೋದ ದಮನಿತರ ನಾಯಕ!?

Update: 2022-06-25 04:36 GMT

ಸುಮಾರು ಒಂದೂವರೆ ದಶಕದಿಂದಲೂ ನನೆಗುದಿಗೆ ಬಿದ್ದಿದ್ದ ‘ಮಂಡಲ್ ವರದಿ’ಯನ್ನು ಜಾರಿಗೆ ತರುವ ಛಾತಿ ತೋರಿದ್ದು ವಿ.ಪಿ. ಸಿಂಗ್ ಅವರ ಒಂದು ಐತಿಹಾಸಿಕ ನಿರ್ಣಯವಾಗಿತ್ತು. 

ಇಂದು ವಿ.ಪಿ. ಸಿಂಗ್ ಬದುಕಿದ್ದಿದ್ದರೆ ಅವರು 91 ವರ್ಷದ(25 ಜೂನ್ 1931 ಅವರ ಹುಟ್ಟಿದ ದಿನಾಂಕ) ಮಾಗಿದ ಜೀವವಾಗಿ ಇರುತ್ತಿದ್ದರು. ಹಿಂದುಳಿದ ವರ್ಗಗಳಿಗಾಗಿ ಒಂದಷ್ಟು ಶಾಸನ ತಂದವರನ್ನು, ಅವರಿಗಾಗಿ ಹೋರಾಡಿದವರನ್ನು ಸಹಜವಾಗಿ ಹಿಂದುಳಿದ ವರ್ಗಗಳು ನೆನೆಯುವುದಿಲ್ಲ! ಹಾಗೆ ನೆನೆಯದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು, ಡಾ.ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ಡಾ.ಅಂಬೇಡ್ಕರ್, ಕಾನ್ಷಿರಾಂ ಅವರಂತಹವರ ಸಾಲಿಗೆ ವಿ.ಪಿ.ಸಿಂಗ್ ಕೂಡ ಸೇರುತ್ತಾರೆ! ಸದಾ ಬ್ರಾಹ್ಮಣೀಕರಣಗೊಳ್ಳಲು ಹಾತೊರೆವ ಹಿಂದುಳಿದ ವರ್ಗಗಳು ತಮಗಾಗಿ ದುಡಿದ ನಾಯಕರನ್ನು ಸ್ಮರಿಸಿದ ಉದಾಹರಣೆಗಳು ಅತಿ ಕಡಿಮೆ!?

ಉತ್ತರ ಪ್ರದೇಶದಿಂದ ಬಂದ ವಿ.ಪಿ. ಸಿಂಗ್ ಭಾರತ ರಾಜಕಾರಣದಲ್ಲಿ ತಮ್ಮ ಛಾಪನ್ನು ಮೂಡಿಸಿ ಹೋದವರು. ಅಲಹಾಬಾದಿನ ವಿದ್ಯಾರ್ಥಿ ನಾಯಕರಾಗಿ ರಾಜಕಾರಣ ಪ್ರವೇಶಿಸಿದ ವಿ.ಪಿ. ಸಿಂಗ್‌ರವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದದ್ದಲ್ಲದೆ ಕೇಂದ್ರ ಸರಕಾರದ ವಿತ್ತ ಸಚಿವರಾಗಿ, ರಕ್ಷಣಾ ಸಚಿವರಾಗಿ ಹೆಸರು ಮಾಡಿದವರು.

ಈ ಮೂರು ಕಾರಣಗಳಿಗಾಗಿ ಭಾರತದ ರಾಜಕಾರಣ ವಿ.ಪಿ. ಸಿಂಗ್ ಅವರನ್ನು ಮರೆಯಬಾರದು. 1. ಬೊಫೋರ್ಸ್ ಹಗರಣ, ಸಬ್ ಮೆರಿನ್ ಹಗರಣದಂತವುಗಳ ವಿರುದ್ಧ ಸೆಟೆದು ನಿಂತು, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಭ್ರಷ್ಟಾಚಾರದ ವಿರುದ್ದ ಧ್ವನಿಯೆತ್ತಿ, ಭ್ರಷ್ಟಾಚಾರವನ್ನು ರಾಷ್ಟ್ರೀಯ ಪ್ರಕರಣವಾಗಿ ಮಾಡಿದವರು ವಿ.ಪಿ.ಸಿಂಗ್.

2. ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಕೇಂದ್ರ ಹುದ್ದೆಗಳಲ್ಲಿ ಮೀಸಲಾತಿ ನೀಡಿದವರು ವಿ.ಪಿ. ಸಿಂಗ್. 3. ಬಿಜೆಪಿ ಜತೆ ಸೇರಿ ಸರಕಾರ ಮಾಡಿದರೂ ತಮ್ಮ ಸೆಕ್ಯುಲರ್ ನಿಲುವುಗಳಲ್ಲಿ ಎಂದೂ ರಾಜಿಯಾಗದೇ ಹೋದವರು ವಿ.ಪಿ. ಸಿಂಗ್.

ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಿದಾಗ ಕಾಂಗ್ರೆಸ್ ಪಕ್ಷದಿಂದಲೇ ಹೊರಬರಬೇಕಾದ ಪ್ರಸಂಗ ಬಂತು. ರಾಜೀವ್ ಗಾಂಧಿಯವರಿಗೆ ಅಷ್ಟು ಆಪ್ತರಾಗಿದ್ದ ವಿ.ಪಿ. ಸಿಂಗ್ ತಮ್ಮ ಮೌಲ್ಯಾಧಾರಿತ ರಾಜಕಾರಣಕ್ಕಾಗಿ ತಮ್ಮ ಆಪ್ತರನ್ನೇ ಬಿಟ್ಟು ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಸುಮಾರು ಒಂದೂವರೆ ದಶಕದಿಂದಲೂ ನನೆಗುದಿಗೆ ಬಿದ್ದಿದ್ದ ‘ಮಂಡಲ್ ವರದಿ’ಯನ್ನು ಜಾರಿಗೆ ತರುವ ಛಾತಿ ತೋರಿದ್ದು ವಿ.ಪಿ. ಸಿಂಗ್ ಅವರ ಒಂದು ಐತಿಹಾಸಿಕ ನಿರ್ಣಯವಾಗಿತ್ತು. ಮಂಡಲ್ ವರದಿಯನ್ನು ಜಾರಿಗೆ ತರುವ ಸಂದರ್ಭದಲ್ಲಿ ವಿ.ಪಿ. ಸಿಂಗ್ ಸರಕಾರದಲ್ಲಿ ಸಹಭಾಗಿಗಳಾಗಿದ್ದ ಬಿಜೆಪಿ, ದೇಶದಾದ್ಯಂತ ಅಡ್ವಾಣಿಯವರ ನೇತೃತ್ವದಲ್ಲಿ ರಾಮಜನ್ಮಭೂಮಿ ಇಷ್ಯೂ ತಂದು ಕೋಮು ದ್ವೇಷ ಮೂಡಿಸಿ ಇಡೀ ದೇಶವನ್ನೇ ಉರಿಸುತ್ತಿತ್ತು. ವಿ.ಪಿ. ಸಿಂಗ್ ಮಂಡಲ್ ವರದಿ ಜಾರಿಗೆ ತರುತ್ತಿದ್ದಂತೆ ಸಂಘಪರಿವಾರ ಮಂಡಲ್‌ಗೆ ವಿರುದ್ಧವಾಗಿ ಕಮಂಡಲ್ ಇಷ್ಯೂ ತಂದು ಹಿಂದುಳಿದ ವರ್ಗಗಳ ಹಿತದ ವಿರುದ್ಧ ದೇಶದ ದಲಿತರನ್ನು ಎತ್ತಿಕಟ್ಟಿ ನಿಮ್ಮ ಪಾಲನ್ನು ಹಿಂದುಳಿದ ವರ್ಗಗಳು ಕಸಿಯುತ್ತಿವೆ ಎಂದು ಹೇಳುತ್ತಲೇ ಮತ್ತೊಂದು ಕಡೆ ಹಿಂದುಳಿದವರಿಗೆ ದಲಿತರು ತಮಗೆ ಸಿಕ್ಕ ಮೀಸಲಾತಿ ಸಾಲದೆಂದು ಮಂಡಲ್ ವರದಿ ಮೂಲಕ ನಿಮ್ಮ ಪಾಲನ್ನೂ ಕಸಿಯಲು ಹೊರಟಿದ್ದಾರೆ ಎಂದು ಹಿಂದುಳಿದವರನ್ನು ದಿಕ್ಕುತಪ್ಪಿಸಿ ಎತ್ತಿಕಟ್ಟಿದರು! ದಲಿತರಿಗೆ ಅಂಬೇಡ್ಕರ್ ಪ್ರಜ್ಞೆ ಇದ್ದಿದ್ದರಿಂದ ದಲಿತರು ಜಾಗೃತರಾದರು. ಆದರೆ ಯಾವುದೇ ಪ್ರಜ್ಞೆಯಿಲ್ಲದೆ ಬ್ರಾಹ್ಮಣ್ಯದ ‘ಗೇಟ್ ಕೀಪರ್’ ಗಳಾಗಿದ್ದ ಹಿಂದುಳಿದವರು ಸಂಘಪರಿವಾರದ ಸಂಚಿಗೆ ಒಳಗಾಗಿ ಮಂಡಲ್ ವರದಿಯ ವಿರುದ್ಧವೇ ಬೀದಿಗಿಳಿದರು! ನಿಜಕ್ಕೂ ಹಿಂದುಳಿದ ವರ್ಗಗಳ ಪರವಾಗಿ ಮಂಡಲ್ ವರದಿ ಜಾರಿಗೆ ಬರುವಂತೆ ಹೋರಾಟ ಮಾಡಿದವರು ಮಾತ್ರ ದಲಿತರೆ!

ಒಂದು ಕಡೆ ಪ್ರಜ್ಞಾಹೀನರಾಗಿದ್ದ ಹಿಂದುಳಿದವರು, ಮತ್ತೊಂದು ಕಡೆ ಮೇಲ್ಜಾತಿಗಳು ವಿ.ಪಿ.ಸಿಂಗ್ ವಿರುದ್ಧ ದೇಶಾದ್ಯಂತ ತೀವ್ರ ಚಳವಳಿ ಆರಂಭಿಸಿದರು. ಮಂಡಲ್ ವರದಿ ಕಾರಣಕ್ಕೇ ಮೇಲ್ಜಾತಿಯ ರಾಜಕಾರಣಿಗಳು ನೇರವಾಗಿ ವಿ.ಪಿ.ಸಿಂಗ್‌ರನ್ನು ತರಾಟೆಗೆ ತೆಗೆದುಕೊಂಡರು! ಹೀಗೆ ಮಂಡಲ್ ವರದಿ ವಿ.ಪಿ.ಸಿಂಗ್ ರಾಜಕೀಯ ಜೀವನವನ್ನೇ ಅಸ್ತವ್ಯಸ್ತ ಮಾಡಿತು. ಆ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಪರವಾಗಿ ಮಂಡಲ್ ವರದಿ ಜಾರಿಗೆ ತಂದ ಠಾಕೂರ್ ಸಮುದಾಯದ ವಿ.ಪಿ. ಸಿಂಗ್ ಅವರ ಜತೆ ಕಾನ್ಷಿರಾಂರವರನ್ನು ಹೊರತುಪಡಿಸಿದರೆ ಮಿಕ್ಕ ಉತ್ತರಪ್ರದೇಶದ ಯಾದವ್ ನಾಯಕ ಮುಲಾಯಂಸಿಂಗ್ ಯಾದವ್ ಅವರೂ ಕೂಡ ವಿ.ಪಿ. ಸಿಂಗ್ ಅವರ ಪರ ನಿಲ್ಲಲಿಲ್ಲ. ಒಂದು ಕಡೆ ಬಲಪಂಥೀಯರಿಂದ ದೂರವಾದ ವಿ.ಪಿ. ಸಿಂಗ್ ಅವರಿಗೆ ಮತ್ತೊಂದು ಕಡೆ ಎಡಪಂಥೀಯರಾದ ಕಮ್ಯುನಿಸ್ಟರೂ ದೂರವಾದರು! ಅದೇ ಸಂದರ್ಭದಲ್ಲಿ ರಥಯಾತ್ರೆ ಹೊರಟ ಅಡ್ವಾಣಿಯವರನ್ನು ಬಿಹಾರದಲ್ಲಿ ಲಾಲುಪ್ರಸಾದ್ ಯಾದವ್ ಬಂಧಿಸಿದ್ದು ವಿ.ಪಿ. ಸಿಂಗ್ ಸರಕಾರಕ್ಕೆ ಬಿಜೆಪಿ ನೀಡಿದ್ದ ಬೆಂಬಲ ವಾಪಸ್ ಪಡೆಯಲು ಒಂದು ಕುಂಟು ನೆಪವಾಯಿತು. ಅಲ್ಲಿಯವರೆಗೂ ವಿ.ಪಿ. ಸಿಂಗ್ ಅವರನ್ನು ಹಾಡಿ ಹೊಗಳುತಿದ್ದ ವಿಪ್ರ ಮಾಧ್ಯಮ ಮಂಡಲ್ ವರದಿ ಅನುಷ್ಠಾನದ ನಂತರ ಸಂಪೂರ್ಣವಾಗಿ ವಿ.ಪಿ.ಸಿಂಗ್ ವಿರುದ್ಧ ತಿರುಗಿಬಿದ್ದಿತು. ಅವರ ಯಾವುದೇ ಹೇಳಿಕೆಗಳನ್ನು ಹಾಕುತ್ತಿರಲಿಲ್ಲ! ಹಾಕಿದರೂ ಯಾರಿಗೂ ಕಾಣದಂತೆ ಎಲ್ಲೋ ಮೂಲೆಯೊಂದರಲ್ಲಿ ಹಾಕುತ್ತಿದ್ದರು. ಕಡೆಗೆ ವಿ.ಪಿ.ಸಿಂಗ್ ಅವರ ಸಾವನ್ನೂ ಕೂಡ ಕೆಲ ಪತ್ರಿಕೆಗಳು ಸಿಂಗಲ್ ಕಾಲಂ ಸುದ್ದಿ ಮಾಡಿ ಕೈತೊಳೆದುಕೊಂಡವು! ಕಡೆಕಡೆಯಲ್ಲಿ ತೀವ್ರ ನೋವಿಗೆ ಒಳಗಾಗಿದ್ದ ವಿ.ಪಿ. ಸಿಂಗ್ ಅವರು ಚಿತ್ರ ಬಿಡಿಸುತ್ತ, ಪದ್ಯ ಬರೆಯುತ್ತ ಕಾಲ ಕಳೆದರು. ಕಡೆಗೆ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ವಿ.ಪಿ. ಸಿಂಗ್ 27ನೇ ನವೆಂಬರ್ 2008ರಲ್ಲಿ ನಿಧನರಾದರು. ಮಂಡಲ್ ವರದಿಯ ಫಲಗಳನ್ನು ಉಂಡ ಹಿಂದುಳಿದ ವರ್ಗ ಅವರ ಸಾವಿಗಾಗಿ ಮರುಗಲೂ ಇಲ್ಲ, ಕೊರಗಲೂ ಇಲ್ಲ. ನೆನಪಿಸಿಕೊಳ್ಳಲೂ ಇಲ್ಲ!! ಹೀಗೆ ಹಿಂದುಳಿದ ವರ್ಗಗಳ ಒಳಿತಿಗಾಗಿ ತಮ್ಮ ರಾಜಕೀಯ ಜೀವನವನ್ನೇ ಕಳೆದುಕೊಂಡ ನಾಯಕರೊಬ್ಬರು ಚರಿತ್ರೆಯ ಪುಟಗಳಲ್ಲಿ ಕಳೆದುಹೋದರು.

Writer - ಡಾ. ಸಿ.ಎಸ್. ದ್ವಾರಕಾನಾಥ್

contributor

Editor - ಡಾ. ಸಿ.ಎಸ್. ದ್ವಾರಕಾನಾಥ್

contributor

Similar News