ಭಾರತದಲ್ಲಿ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆ ಖಂಡಿಸಿ ಹೌಸ್ಟನ್‍ನಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ

Update: 2022-06-25 15:21 GMT
Photo: IAMC

ವಾಷಿಂಗ್ಟನ್, ಜೂ.25: ಭಾರತ ಸರಕಾರದಿಂದ ಇತ್ತೀಚೆಗೆ ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ದಲಿತರ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಹಾಗೂ ಆಡಳಿತಾರೂಢ ಬಿಜೆಪಿಯ ಸದಸ್ಯೆಯೊಬ್ಬರು ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಹೂಸ್ಟನ್ನಲ್ಲಿ ಮುಸ್ಲಿಮ್ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೂರಾರು ಭಾರತೀಯ ಅಮೆರಿಕನ್ನರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ. 
ಭಾರತದಲ್ಲಿ ಮುಸ್ಲಿಮರ ಸ್ಥಿತಿ ಹೀನಾಯವಾಗಿದೆ. ತನ್ನದೇ ಮುಸ್ಲಿಂ ನಾಗರಿಕರ ವಿರುದ್ಧದ ಸರಕಾರದ ಕ್ರೂರ ದಮನಕ್ಕೆ ಪೊಲೀಸ್ ಮತ್ತು ನ್ಯಾಯಾಂಗವು ಸಹಭಾಗಿಯಾಗಿದೆ. ಜೂನ್ ತಿಂಗಳಲ್ಲೇ ಭಾರತದಲ್ಲಿ ಮುಸ್ಲಿಮರ ಹತ್ಯೆ, ನಿರಂಕುಶ ಬಂಧನ ಪ್ರಕರಣ ಹೆಚ್ಚಿದ್ದು ಮುಸ್ಲಿಮರ ಮನೆಗಳನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್(ಐಎಎಂಸಿ)ನ ಹೂಸ್ಟನ್ ಘಟಕದ ಅಧ್ಯಕ್ಷ ಶಕೀಬ್ ಮಸೂದ್ ‘ ಭಾರತವು ತ್ವರಿತವಾಗಿ ಫ್ಯಾಸಿಸ್ಟ್(ಉಗ್ರ ಬಲಪಂಥೀಯ) ದೇಶವಾಗಿ ಬದಲಾಗುತ್ತಿದ್ದು ಅಲ್ಪಸಂಖ್ಯಾತರು ನಿಯಮಿತವಾಗಿ ಅವಮಾನ ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸಮುದಾಯದವರು ಕೈಜೋಡಿಸಬೇಕು ’ ಎಂದರು. ಇದೇ ಸಂದರ್ಭ ಮಾತನಾಡಿದ ಇಸ್ಲಾಮಿಕ್ ಸೊಸೈಟಿ ಆಫ್ ಗ್ರೇಟರ್ ಹೂಸ್ಟನ್ (ಐಎಸ್ಜಿಎಚ್) ಅಧ್ಯಕ್ಷ ಅಯ್ಮಾನ್ ಕಬೀರ್ , ಭಾರತದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ವಿರುದ್ಧದ ಕ್ರೂರ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದರು. 

ನಾವು ನ್ಯಾಯಕ್ಕಾಗಿ, ಮಾನವ ಹಕ್ಕುಗಳ ಪರವಾಗಿ ನಿಲ್ಲುತ್ತೇವೆ. ಭಾರತೀಯ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ವಿರುದ್ಧ ನಡೆಸುತ್ತಿರುವ ಅಮಾನುಷ ಕೃತ್ಯಗಳು ನಿಲ್ಲಬೇಕು. ಇದನ್ನು ಸಮಾಜದ ಎಲ್ಲಾ ವರ್ಗದವರೂ ಖಂಡಿಸಬೇಕು ಮತ್ತು ಭಾರತೀಯ ಮುಸ್ಲಿಮರ ದುಃಸ್ಥಿತಿಯನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕು ಎಂದವರು ಆಗ್ರಹಿಸಿದರು. ‘ಅಫ್ರೀನ್ ಫಾತಿಮಾ ಜತೆ ನಿಲ್ಲಲಿದ್ದೇವೆ’, ಭಾರತೀಯ ಮುಸ್ಲಿಂ ಜನಾಂಗೀಯ ಹತ್ಯೆಯನ್ನು ನಿಲ್ಲಿಸಿ ’ ಮುಂತಾದ ಘೋಷಣೆಗಳನ್ನು ಪ್ರತಿಭಟನಾಕಾರರು ಮೊಳಗಿಸಿದರು. 

ಕ್ಯಾಲಿಫೋರ್ನಿಯಾ, ದಲ್ಲಾಸ್ ನಗರಗಳಲ್ಲಿ ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆ ನಡೆದಿದೆ. ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್(ಐಎಎಂಸಿ), ಇಸ್ಲಾಮಿಕ್ ಸೊಸೈಟಿ ಆಫ್ ಗ್ರೇಟರ್ ಹೂಸ್ಟನ್ (ಐಎಸ್ಜಿಎಚ್), ಇಸ್ಲಾಮಿಕ್ ಸರ್ಕಲ್ ಆಫ್ ನಾರ್ಥ್ ಅಮೆರಿಕ, ಕೌನ್ಸಿಲ್ ಆಫ್ ಅಮೆರಿಕನ್ ಇಸ್ಲಾಮಿಕ್ ರಿಲೇಷನ್ಸ್(ಸಿಎಐಆರ್), ಮುಸ್ಲಿಮ್ ಅಮೆರಿಕನ್ ಸೊಸೈಟಿ ಮತ್ತು ಮುಸ್ಲಿಂ ಉಮಾಹ್ ಆಫ್ ನಾರ್ಥ್ ಅಮೆರಿಕ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ. 2022ರ ಎಪ್ರಿಲ್ನಲ್ಲಿ ಬಿಡುಗಡೆಗೊಳಿಸಿರುವ ವಾರ್ಷಿಕ ವರದಿಯಲ್ಲಿ ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗವು ಭಾರತವನ್ನು ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ, ಅತಿರೇಕದ ಉಲ್ಲಂಘನೆಗಾಗಿ ಸತತ 3ನೇ ವರ್ಷ ‘ನಿರ್ದಿಷ್ಟ ಕಾಳಜಿಯ ದೇಶಗಳ’ ಪಟ್ಟಿಯಲ್ಲಿ ಸೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News