ಗುಜರಾತ್‌ ಎಟಿಎಸ್‌ನಿಂದ ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಬಂಧನ

Update: 2022-06-25 17:05 GMT
Photo: Indianexpress

 ಹೊಸದಿಲ್ಲಿ,ಜೂ.25: ಗುಜರಾತ್ ಗಲಭೆ ಸಂತ್ರಸ್ತರ ಪರ ಕಾನೂನು ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳ ಶನಿವಾರ ಮುಂಬೈನಲ್ಲಿ ಬಂಧಿಸಿದೆ. ನಿವೃತ್ತ ಪೊಲೀಸ್ ವರಿಷ್ಠ ಆರ್.ಬಿ.ಶ್ರೀಕುಮಾರ್ ಅವರನ್ನು ಕೂಡಾ ಗುಜರಾತ್ ಪೊಲೀಸರು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ತೀಸ್ತಾ ಸೆಟಲ್ವಾಡ್ ಹಾಗೂ ಇನ್ನಿಬ್ಬರು ಮಾಜಿ ಐಪಿಎಸ್ ಅಧಿಕಾರಿಗಳಾದ ಸಂಜೀವ್ ಭಟ್ ಹಾಗೂ ಶ್ರೀಕುಮಾರ್ , ಗುಜರಾತ್ ಗಲಭೆಗೆ ಸಂಬಂಧಿಸಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆಂದು ಅವರ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಗುಜರಾತ್ ಗಲಭೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್ ಅನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿತ್ತು. ಇದಾದ ಮರುದಿನವೇ ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿದೆ.

ಸೆಟಲ್ವಾಡ್ ಅವರು ಗುಜರಾತ್‌ಗಲಭೆಯ ಸಂತ್ರಸ್ತೆ ಝಾಕಿಯಾ ಜಾಫ್ರಿ ಅವರ ಮೂಲಕ ನ್ಯಾಯಾಲಯದಲ್ಲಿ ಹಲವಾರು ಅರ್ಜಿಗಳನ್ನು ದಾಖಲಿಸುವಂತೆ ಮಾಡಿದ್ದರು ಹಾಗೂ ವಿಶೇಷ ತನಿಖಾ ತಂಡ ಹಾಗೂ ಇತರ ತನಿಖಾ ಆಯೋಗಗಳಿಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಆಪಾದಿಸಲಾಗಿದೆ.
  
ಶನಿವಾರ ಮುಂಬೈನ ಜುಹುವಿನಲ್ಲಿರುವ ತೀಸ್ತಾರ ನಿವಾಸಕ್ಕೆ ಆಗಮಿಸಿದ ಗುಜರಾತ್‌ನ ಎಟಿಎಸ್ ತಂಡವು, ಅವರನ್ನು ಸಾಂತಾಕ್ರೂಝ್ ಪೊಲೀಸ್ ಠಾಣೆಗೆ ಕರೆದೊಯ್ಯಿತು . ಅಲ್ಲಿ ಅವರನ್ನು ಬಂಧಿಸಲಾಯಿತು. ಆನಂತರ ಅವರನ್ನು ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಕ್ರೈಂಬ್ರಾಂಚ್ ಕಚೇರಿಗೆ ಕರೆತರಲಾಯಿತು ಎಂದು ಅಹ್ಮದಾಬಾದ್ ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
   
ಸೆಟಲ್ವಾಡ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 468 (ವಂಚನೆಯ ಉದ್ದೇಶದಿಂದ ಫೋರ್ಜರಿ ದಾಖಲೆಗಳ ಸೃಷ್ಟಿ), 471 ( ನಕಲಿ ದಾಖಲೆಗಳನ್ನು ನೈಜವೆಂಬಂತೆ ಬಿಂಬಿಸಿ ಬಳಸುವುದು), 194 (ಮರಣದಂಡನೆಯ ಶಿಕ್ಷೆಯಾಗುವಂತೆ ಮಾಡುವ ಉದ್ದೇಶದಿಂದ ಸುಳ್ಳು ಪುರಾವೆಗಳನ್ನು ನೀಡುವುದು ಅಥವಾ ರೂಪಿಸುವುದು), 211 (ಅಪರಾಧ ಎಸಗಿರುವುದಾಗಿ ಸುಳ್ಳು ಆರೋಪ ಹೊರಿಸುವುದು), 120 (ಬಿ) (ಕ್ರಿಮಿನಲ್ ಸಂಚು) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ , ಡಿಸಿಪಿ ಸಂಜಯ್ ಲಾಟ್ಕರ್ ತಿಳಿಸಿದ್ದಾರೆ.
 
 ಈ ಮಧ್ಯೆ ಗುಜರಾತ್‌ನ ಭಯೋತ್ಪಾದನಾ ನಿಗ್ರಹದಳದ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ತೀಸ್ತಾ ಸೆಟಲ್ವಾಡ್ ಅವರು ಸಾಂತಕ್ರೂಝ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಅರ್ಜಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆಂದು ಸೆಟಲ್ವಾಡ್ ಅವರ ನ್ಯಾಯವಾದಿ ವಿಜಯ್ ಹಿರೇಮಠ್ ತಿಳಿಸಿದ್ದಾರೆ. ನಮಗೆ ಮಾಹಿತಿ ನೀಡದೆಯೇ ಗುಜರಾತ್‌ನ ಎಟಿಎಸ್ ಪೊಲೀಸರು ತೀಸ್ತಾ ಅವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ’’ ಎಂದು ಹಿರೇಮಠ್ ಆಪಾದಿಸಿದ್ದಾರೆ.

ನಿವೃತ್ತ ಡಿಜಿಪಿ ಶ್ರೀಕುಮಾರ್ ಬಂಧನ
 
ಈ ಮಧ್ಯೆ ಅಹ್ಮದಾಬಾದ್‌ನ ಕ್ರೈಂಬ್ರಾಂಚ್ ತಂಡವೊಂದು ನಿವೃತ್ತ ಡಿಜಿಪಿ ಆರ್.ಬಿ.ಶ್ರೀಕುಮಾರ್ ಅವರನ್ನು ಗಾಂಧಿನಗರದಲ್ಲಿರುವ ಅವರ ನಿವಾಸದಿಂದ ಶನಿವಾರ ಮಧ್ಯಾಹ್ನ ಬಂಧಿಸಿದೆ ಹಾಗೂ ಅವರನ್ನು ಅಹ್ಮದಾಬಾದ್‌ನ ಜಮಾಲ್‌ಪುರದಲ್ಲಿರುವ ಗಾಯಕ್ವಾಡ್ ಹವೇಲಿಯಲ್ಲಿರುವ ಕ್ರೈಂಬ್ರಾಂಚ್ ಮುಖ್ಯ ಕಾರ್ಯಾಲಯಕ್ಕೆ ಕೊಂಡೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
   
ಸೆಟಲ್ವಾಡ್ ಜೊತೆಗೆ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಹಾಗೂ ಹಾಗೂ ಈಗಾಗಲೇ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ವಜಾಗೊಂಡ ಐಪಿಎಸ್ ಸಂಜೀವ್ ಭಟ್ ವಿರುದ್ಧ ಫೋರ್ಜರಿ, ಸಂಚು ಹಾಗೂ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 468,471,194, 211, 218 ಹಾಗೂ 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
 
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಪೊಲೀಸರು ತಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ರಾಜ್ಯ ಸರಕಾರವು ತಡೆದಿತ್ತೆಂದು ಶ್ರೀಕುಮಾರ್ ಆಪಾದಿಸಿದ್ದರು. ಸಂಜೀವ್ ಭಟ್ ಅವರು ಗುಜರಾತ್ ಗಲಭೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಿದ್ದರೆಂದು ಆಪಾದಿಸಿದ್ದರು.
  
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, 2002ರ ಗುಜರಾತ್‌ಗಲಭೆ ಬಗ್ಗೆ ಸೆಟಲ್ವಾಡ್ ಅವರು ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿದ್ದರು ಎಂ ಆಪಾದಿಸಿದ್ದರು. ಅಲ್ಲದೆ ಸೆಟಲ್ವಾಡ್ ನಡೆಸುತ್ತಿದ್ದ ಎನ್‌ಜಿಓ ಸಂಸ್ಥೆಯೊಂದು ಪೊಲೀಸ್‌ಠಾಣೆಗಳಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ದೂರುಗಳನ್ನು ನೀಡಿದ್ದರು ಎಂದು ಶಾ ಹೇಳಿದ್ದರು.
  
ಗುಜರಾತ್ ಗಲಭೆಗೆ ಸಂಬಂಧಿಸಿ ಗುಜರಾತ್ ಹೈಕೋರ್ಟ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದ ಕ್ಲೀನ್‌ಚಿಟ್ ಅನ್ನು ಶುಕ್ರವಾರ ಎತ್ತಿಹಿಡಿದ ಸುಪ್ರೀಂಕೋರ್ಟ್, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ದುರುದ್ದೇಶದಿಂದ ಅರ್ಜಿದಾರೆ ಹಾಗೂ ಸನ್ನಿವೇಶದ ನೈಜ ಸಂತ್ರಸ್ತೆಯಾದ ಝಕಿಯಾ ಝಾಫ್ರಿ ಅವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತೀಸ್ತಾ ಅವರ ಪೂರ್ವಾಪರಗಳ ಬಗ್ಗೆ ಪರಿಶೀಲಿಸಬೇಕಾಗಿದೆಯೆಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿತ್ತು.
 
2002ರ ಗುಜರಾತ್ ಗಲಭೆ ಸಂದರ್ಭ ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು 2018ರಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು.ಗುಜರಾತ್ ಗಲಭೆಗೆ ಸಂಬಂಂಧಿಸಿ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿಲ್ಲ ಹಾಊಗ ಅದರ ತನಿಖೆಯ ಪಕ್ಷಪಾತದಿಂದ ಕೂಡಿತ್ತು ಹಾಗೂ ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ವಿರುದ್ಧ ವಿಚಾರಣೆಯಾಗಬೇಕೆಂದು ಅವರು ನ್ಯಾಯಾಲವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News