ಇಸ್ರೇಲ್ ಯೋಧರು ಸಿಡಿಸಿದ ಬುಲೆಟ್‌ ನಿಂದ ಪತ್ರಕರ್ತೆ ಶಿರೀನ್ ಮೃತ್ಯು: ವಿಶ್ವಸಂಸ್ಥೆ ತನಿಖಾ ವರದಿ

Update: 2022-06-25 15:26 GMT

ಜಿನೆವಾ, ಜೂ.25: ಇಸ್ರೇಲ್ ಯೋಧರು ಪ್ರಯೋಗಿಸಿದ ಬುಲೆಟ್ನಿಂದ ಅಲ್ಜಝೀರಾದ ಪತ್ರಕರ್ತೆ ಶಿರೀನ್ ಹತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿರುವುದಾಗಿ ಖತರ್ ನ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಶುಕ್ರವಾರ ವರದಿ ಮಾಡಿದೆ.

ನಾವು ಸಂಗ್ರಹಿಸಿರುವ ಎಲ್ಲಾ ಮಾಹಿತಿಗಳೂ , ಪತ್ರಕರ್ತೆ ಶಿರೀನ್ ರ ಹತ್ಯೆ ಮತ್ತು ಅವರ ಸಹೋದ್ಯೋಗಿಯನ್ನು ಗಾಯಗೊಳಿಸಲು ಕಾರಣವಾದ ಗುಂಡುಗಳು ಇಸ್ರೇಲ್ ಭದ್ರತಾ ಪಡೆಗಳಿಂದ ಬಂದವು ಮತ್ತು ಸಶಸ್ತ್ರ ಪೆಲೆಸ್ತೀನ್ ಸಂಘಟನೆಗಳ ವಿವೇಚನೆಯಿಲ್ಲದ ಗುಂಡಿನ ದಾಳಿಯಿಂದ ಅಲ್ಲ ಎಂಬುದಕ್ಕೆ ಪೂರಕವಾಗಿವೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ವಕ್ತಾರೆ ರವೀನಾ ಶಾಮ್ದಾಸಾನಿ ಜಿನೆವಾದಲ್ಲಿ ಹೇಳಿದ್ದಾರೆ.

ತಾವು ಮಾಧ್ಯಮದ ಸದಸ್ಯರು ಎಂದು ಇಸ್ರೇಲ್ ಯೋಧರಿಗೆ ಮನವರಿಕೆ ಮಾಡಲು ಶಿರೀನ್ ಪ್ರಯತ್ನ ಪಟ್ಟಿರುವುದು ತಮ್ಮ ಸಂಸ್ಥೆಯು ನಡೆಸಿದ ತನಿಖೆಯಲ್ಲಿ ಕಂಡುಬಂದಿದೆ. ಶಿಬಿರದೊಳಗಿರುವ ಶಸ್ತ್ರಸಜ್ಜಿತ ಪೆಲೆಸ್ತೀನೀಯರ ಪ್ರದೇಶದಿಂದ ದೂರವಿರಲು ಬದಿಯಲ್ಲಿದ್ದ ರಸ್ತೆಯನ್ನು ಶಿರೀನ್ ಮತ್ತಾಕೆಯ ಜತೆಗಿದ್ದ ಪತ್ರಕರ್ತರು ಆಯ್ಕೆ ಮಾಡಿಕೊಂಡರು ಮತ್ತು ಬೀದಿಯಲ್ಲಿ ನಿಯೋಜಿಸಲಾದ ಇಸ್ರೇಲಿ ಪಡೆಗಳಿಗೆ ತಮ್ಮ ಉಪಸ್ಥಿತಿಯನ್ನು ಗೋಚರಿಸುವಂತೆ ಅವರು ನಿಧಾನವಾಗಿ ಮುಂದುವರಿದರು. ಆ ಸಮಯದಲ್ಲಿ ಮತ್ತು ಆ ಸ್ಥಳದಲ್ಲಿ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇಸ್ರೇಲಿ ಪಡೆಗಳ ದಿಕ್ಕಿನಿಂದ ಪತ್ರಕರ್ತರ ಕಡೆಗೆ ಗುಂಡು ಹಾರಿಸಲಾಗಿದೆ. ಗುಂಡೇಟಿನಿಂದ ಕೆಳಗೆ ಬಿದ್ದ ಶಿರೀನ್ರ ನೆರವಿಗೆ ಧಾವಿಸಿದ ನಿರಾಯುಧ ವ್ಯಕ್ತಿಯ ಮೇಲೂ ಗುಂಡು ಹಾರಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ರವೀನಾ ಶಾಮ್ದಾಸಾನಿ ಹೇಳಿದ್ದಾರೆ.

ಈ ವರದಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಪಡೆ, ತನ್ನ ಯೋಧರು ಉದ್ದೇಶಪೂರ್ವಕವಾಗಿ ಶಿರೀನ್ ಮೇಲೆ ಗುಂಡು ಹಾರಿಸಿಲ್ಲ ಎಂಬುದು ತಾನು ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಶಿರೀನ್ ಹತ್ಯೆಗೆ ಪೆಲೆಸ್ತೀನ್ ಬಂದೂಕುಧಾರಿಯ ವಿವೇಚನಾರಹಿತ ಗುಂಡಿನ ದಾಳಿ ಕಾರಣವೇ ಅಥವಾ ಇಸ್ರೇಲ್ ಯೋಧರು ಸರಿಯಾಗಿ ಗಮನಿಸದೆ ನಡೆಸಿದ ಗುಂಡಿನ ದಾಳಿ ಕಾರಣವೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದೆ.

ಪೆಲೆಸ್ತೀನ್ ಸಂಘಟನೆಯ ಸದಸ್ಯರ ಗುಂಡೇಟಿಗೆ ಶಿರಿನ್ ಬಲಿಯಾಗಿರುವ ಸಾಧ್ಯತೆಯಿದೆ ಎಂದು ಇಸ್ರೇಲ್ ಪ್ರಧಾನಿ ಸಹಿತ ಪ್ರಮುಖ ಮುಖಂಡರು ಆರಂಭದಲ್ಲಿ ಪ್ರತಿಪಾದಿಸಿದ್ದರು. ಆದರೆ ಬಳಿಕ ಹೇಳಿಕೆ ಬದಲಿಸಿದ ಇಸ್ರೇಲ್, ಇಸ್ರೇಲ್ ಯೋಧ ಗುಂಡು ಹಾರಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿತ್ತು. ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್ ಹೇಳಿಕೆ ನೀಡಿದ್ದರೂ ತನಿಖೆಯ ವರದಿಯನ್ನು ಇದುವರೆಗೆ ಬಿಡುಗಡೆಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News