ತೀಸ್ತಾ ಸೆಟಲ್ವಾಡ್ ಬಂಧನವು ಪ್ರಜಾಪ್ರಭುತ್ವದ ಕಗ್ಗೊಲೆ: ಸುಂದರ ಮಾಸ್ತರ್

Update: 2022-06-26 14:58 GMT

ಉಡುಪಿ : ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನವು ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಶಾಖೆ ವತಿಯಿಂದ ರವಿವಾರ ಕರೆದ ತುರ್ತು ಸಭೆಯಲ್ಲಿ ತೀಸ್ತಾ ಸೆಟಲ್ವಾಡ್ ಬಂಧನವನ್ನು ತೀವ್ರವಾಗಿ ಖಂಡಿಸಲಾಯಿತು. ಭಾರತವು ಸರ್ವಾಧಿಕಾರಿ ಹಿಟ್ಲರ್ ಮಾದರಿಯ ಆಡಳಿತದತ್ತ ಸಾಗುತ್ತಿದೆ. ಅನ್ಯಾಯ, ದೌರ್ಜನ್ಯ, ದುರಾ ಡಳಿತದ ವಿರುದ್ಧ ಧ್ವನಿ ಎತ್ತಿದ ವರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ಬಡವರ, ದಲಿತರ ಪರ ಹೋರಾಟ ಮಾಡುವ ಹೋರಾಟಗಾರರನ್ನೆಲ್ಲಾ ಪೊಲೀಸರೇ ಸುಳ್ಳು ಕೇಸು ದಾಖಲಿಸಿ ಅದಕ್ಕೆ ಬೇಕಾದ ಪುರಾವೆಗಳನ್ನು ತಾವೇ ಸೃಷ್ಠಿಸಿ ಎಲ್ಲಾ ಜನಪರ ಚಳವಳಿಗಾರರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಲಾಗು ತ್ತಿದೆ ಎಂದು ಅವರು ದೂರಿದರು.

ಸಭೆಯಲ್ಲಿ ಬಂಧನ ಖಂಡಿಸಿ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧರಿಸ ಲಾಯಿತು. ಸಭೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ ರಾಜ್ ಬಿರ್ತಿ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮ ಸುಂದರ ತೆಕ್ಕಟ್ಟೆ, ಮಂಜುನಾಥ ಬಾಳ್ಕುದ್ರು, ಶ್ರೀಧರ್ ಕುಂಜಿಬೆಟ್ಟು, ಪ್ರವೀಣ್ ಗುಂಡಿಬೈಲು, ಶಿವರಾಮ ಕಾಪು, ರಾಘವ ಬೆಳ್ಳೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News