ಕಟಪಾಡಿ ಜಂಕ್ಷನ್ ರಾ.ಹೆದ್ದಾರಿ ಅಂಡರ್‌ಪಾಸ್ ಕಾಮಗಾರಿ ಆರಂಭ: ಸಂಚಾರದಲ್ಲಿ ಬದಲಾವಣೆ
ಕಾಪು, ಡಿ.18: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಮತ್ತು ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿ ಇದೀಗ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸುಮಾರು 17 ಕೋಟಿ ರೂ. ವೆಚ್ಚದ ಈ ಯೋಜನೆ ಇದಾಗಿದ್ದು, ಈಗಾಗಲೇ ಕಟಪಾಡಿ ಜಂಕ್ಷನ್ ಬಂದ್ ಮಾಡಿ, ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಹಾಗೂ ಶಿರ್ವ ಕಡೆ ಹೋಗುವ ವಾಹನಗಳು ಕಟಪಾಡಿ ಜಂಕ್ಷನ್‌ನಲ್ಲಿರುವ ಸರ್ವಿಸ್ ರಸ್ತೆಯ ಮೂಲಕ ಸಾಗಬೇಕು.
ಮಂಗಳೂರು ಸಾಗುವ ವಾಹನಗಳು ಅದೇ ಸರ್ವಿಸ್ ರಸ್ತೆಯಲ್ಲಿ ಮುಂದುವರೆದು ಪೊಸಾರು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಥದಲ್ಲಿ ಹೆದ್ದಾರಿಯನ್ನು ಸೇರಬೇಕು. ಸುಗಮ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪೂರ್ವ ಭಾಗದಲ್ಲಿರುವ ಸರ್ವಿಸ್ ರಸ್ತೆಯ ಈ ಮೊದಲಿನ ಡಿವೈಡರ್ ಕಟ್ಟೆಯ ಒಂದು ಭಾಗವನ್ನು ತೆರವುಗೊಳಿಸಿ ಅಗಲಗೊಳಿಸಲಾಗಿದೆ.
ಮಂಗಳೂರು ಭಾಗದಿಂದ ಬರುವ ವಾಹನಗಳು ಕಲ್ಲಾಪು ದಾಟಿ ಬಂದ ಕೂಡಲೇ ಅಳವಡಿಸಿದ ಮಾರ್ಗಸೂಚಿ ಯಂತೆ ತಿರುವು ಪಡೆದುಕೊಂಡು ರಾ.ಹೆ. 66ರ ಪೂರ್ವ ಭಾಗದಲ್ಲಿ ಸಂಚರಿಸಿ ಕಟಪಾಡಿ ಜಂಕ್ಷನ್ ದಾಟಿದ ಬಳಿಕ ಪಶ್ಚಿಮ ಭಾಗದ ರಾ.ಹೆ. ಸೇರಿಕೊಂಡು ಉಡುಪಿ ಕಡೆ ಮುಂದು ವರೆಯಬೇಕು.
ಶಿರ್ವ ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಿಂದ ಕಟಪಾಡಿ ಪೇಟೆಗೆ ನೇರ ಪ್ರವೇಶವನ್ನು ಮುಚ್ಚಲಾಗಿದ್ದು, ಮಂಗಳೂರು ಭಾಗಕ್ಕೆ ಸಂಚರಿಸಿ ಕಲ್ಲಾಪು ಬಳಿ ರಾ.ಹೆ. 66ರ ಪಶ್ಚಿಮ ಭಾಗವನ್ನು ತಲುಪಬೇಕು. ಇದರಿಂದ ಶಿರ್ವ ಕಡೆಯವರು ಕಟಪಾಡಿ ಪೇಟೆ ತಲುಪಲು ದೂರ ಸಂಚಾರ ಮಾಡ ಬೇಕಾಗಿದೆ. ಮಂಗಳೂರು ಕಡೆಯಿಂದ ಬರುವ ವರು ಶಿರ್ವ ಕಡೆ ಹೋಗಲು ಫಾರೆಸ್ಟ್ ಗೇಟ್ ಬಳಿಯ ಡಿವೈಡರ್‌ನಲ್ಲಿ ಯೂ ಟರ್ನ್ ತೆಗೆದುಕೊಂಡು ಬರಬೇಕಾಗಿದೆ. ಈ ಯುಟರ್ನ್ ಅಪಾಯಕಾರಿಯಾಗಿದ್ದು, ವೇಗ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.