ಬಂದ್ಯೋಡ್ | ಯುವಕನ ಕೊಲೆ ಪ್ರಕರಣ: 10 ಮಂದಿಯ ತಂಡದಿಂದ ಕೃತ್ಯ

Update: 2022-06-27 06:06 GMT
ಅಬೂಬಕರ್ ಸಿದ್ದೀಕ್

ಕಾಸರಗೋಡು, ಜೂ.27: ಬಂದ್ಯೋಡ್ ನಲ್ಲಿ ರವಿವಾರ ಕೊಲೆಯಾದ ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗು ನಿವಾಸಿ ಅಬೂಬಕರ್ ಸಿದ್ದೀಕ್(32) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ.  ಪೈವಳಿಕೆಯ ನೂರ್ ಷಾ, ಶಾಫಿ ಸೇರಿದಂತೆ  ಹತ್ತು ಮಂದಿಯ ತಂಡ ಈ ಕೊಲೆ ಕೃತ್ಯದಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಣಕಾಸಿನ ವಹಿವಾಟು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಸಿದ್ದೀಕ್ ರನ್ನು ರವಿವಾರ ರಾತ್ರಿ 9 ಗಂಟೆ ಸುಮಾರಿಗೆ ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ  ತಲಪಿಸಿದ ಇಬ್ಬರು ಯುವಕರು ಹಾಗೂ  ವಾಹನದ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಬೆಳಗ್ಗೆಯಷ್ಟೇ ಗಲ್ಫ್ ನಿಂದ ಬಂದಿದ್ದ ಸಿದ್ದೀಕ್!
ಅಬೂಬಕರ್ ಸಿದ್ದೀಕ್ ರವಿವಾರ ಬೆಳಗ್ಗೆಯಷ್ಟೇ ಊರಿಗೆ  ತಲಪಿದ್ದರು. ಸಿದ್ದೀಕ್ ಸಹೋದರ ಸೇರಿದಂತೆ ಇಬ್ಬರನ್ನು ಅಪಹರಿಸಿ ಒತ್ತೆಯಾಳಗಿರಿಸಿಕೊಂಡ ತಂಡ ಸಿದ್ದೀಕ್ ರನ್ನು ಊರಿಗೆ ಬರುವಂತೆ ಮಾಡಿತ್ತು. ಊರಿಗೆ ತಲಪಿದ ಕೆಲ ಕ್ಷಣದಲ್ಲೇ ಸಿದ್ದೀಕ್ ರನ್ನು ಅಪಹರಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿದ್ದೀಕ್ ರ ಸಹೋದರ ಅನ್ವರ್ ಹಾಗೂ  ಸಂಬಂಧಿಕ ಅನ್ಸಾರ್ ಎಂಬವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆಯೇ  ಅಪಹರಿಸಿ ದಿಗ್ಬಂಧನದಲ್ಲಿರಿಸಿದ್ದರು. ಅವರ ಮೇಲೆ ಹಲ್ಲೆ ನಡೆಸಿದ್ದ ತಂಡವು ಸಿದ್ದೀಕ್ ಊರಿಗೆ ಬಂದಲ್ಲಿ ಮಾತ್ರ  ಬಿಡುಗಡೆಗೊಳಿಸುವುದಾಗಿ  ಬೇಡಿಕೆ ಇರಿಸಿತ್ತು. ಅದರಂತೆ ಸಿದ್ದಿಕ್  ರವಿವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಊರಿಗೆ ಆಗಮಿಸಿದ್ದರು. ಈ ನಡುವೆ ಸಿದ್ದೀಕ್ ರನ್ನು  ತಂಡವು ಅಪಹರಿಸಿದೆ. ಬಳಿಕ ಅನ್ಸಾರ್ ಮತ್ತು ಅನ್ವರ್ ಅವರನ್ನು ಬಿಡುಗಡೆಗೊಳಿಸಿದೆ. ಹಲ್ಲೆಗೊಳಗಾಗಿರುವ ಅನ್ವರ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದೀಕ್ ರನ್ನು ಕೊಲೆಗೈದ ತಂಡವು ರವಿವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತದೇಹವನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಯೊಂದರ ಬಳಿ ತೊರೆದು ಪರಾರಿಯಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News