ಮುಕೇಶ್ ಅಂಬಾನಿ ಭದ್ರತೆ ಕುರಿತು ತ್ರಿಪುರಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಕೇಂದ್ರ ಮೊರೆ

Update: 2022-06-27 10:24 GMT
Photo:PTI

ಹೊಸದಿಲ್ಲಿ: ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಉನ್ನತ ಮಟ್ಟದ ಭದ್ರತೆ ಒದಗಿಸಿರುವ ಕುರಿತು ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ತ್ರಿಪುರಾ ಹೈಕೋರ್ಟ್‌ ನೀಡಿರುವ  ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ ಎಂದು ಲೈವ್ ಲಾ ಸೋಮವಾರ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ  ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾಕಾಲದ ಪೀಠವು ಮಂಗಳವಾರ ಪ್ರಕರಣವನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು.

ಜೂನ್ 21 ರಂದು, ತ್ರಿಪುರಾ ಹೈಕೋರ್ಟ್ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರು ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಗ್ರಹಿಕೆ ಕುರಿತು ಗೃಹ ಸಚಿವಾಲಯದ ಮೂಲ ಕಡತವನ್ನು ತನ್ನ ಮುಂದೆ ಇಡುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಬಿಕಾಶ್ ಸಹಾ ಎಂಬ ವ್ಯಕ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್  ಈ ಆದೇಶ ನೀಡಿದೆ.

ಅಂಬಾನಿಗೆ ನೀಡಿರುವ ಭದ್ರತೆಗೂ. ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲವಾದ್ದರಿಂದ ತ್ರಿಪುರಾ ಹೈಕೋರ್ಟ್‌ಗೆ ಅರ್ಜಿಯನ್ನು ಪರಿಗಣಿಸಲು ಯಾವುದೇ ಅಧಿಕಾರವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಪ್ರತಿಪಾದಿಸಿದರು ಎಂದು ಪಿಟಿಐ ವರದಿ ಮಾಡಿದೆ.

"ಗೌರವಾನ್ವಿತ ಉಚ್ಚ ನ್ಯಾಯಾಲಯವು ಜಾರಿಗೊಳಿಸಿದ ಮಧ್ಯಂತರ ಆದೇಶಗಳು ಸಂಪೂರ್ಣವಾಗಿ ನ್ಯಾಯವ್ಯಾಪ್ತಿಯಿಲ್ಲ ಹಾಗೂ  ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ. ಆದ್ದರಿಂದ  ಇದನ್ನು ರದ್ದುಗೊಳಿಸಬೇಕು " ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ಹೇಳಿದೆ.

'ಇಂಡಿಯಾ ಟುಡೇ' ಪ್ರಕಾರ, ಮುಖೇಶ್ ಅಂಬಾನಿ ಹಾಗೂ  ಅವರ ಕುಟುಂಬ ಸದಸ್ಯರಿಗೆ Z+ ಭದ್ರತೆಯನ್ನು ಒದಗಿಸಲಾಗಿದೆ. ಅದರ ಅಡಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 58 ಸಿಬ್ಬಂದಿ ಅವರನ್ನು 24 ಗಂಟೆಗಳ ಕಾಲ ಕಾವಲು ಕಾಯುತ್ತಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಬೆದರಿಕೆ ಗ್ರಹಿಕೆಯನ್ನು ಪರಿಶೀಲಿಸಿದ ನಂತರ 2013 ರಲ್ಲಿ ಅವರ ಭದ್ರತಾ ಮಟ್ಟವನ್ನು Z ವರ್ಗದಿಂದ ಮೇಲ್ದರ್ಜೆಗೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News