ಝುಬೈರ್‌ರನ್ನು ಒಂದು ಗಂಟೆಯಿಂದ ಪೊಲೀಸ್‌ ಬಸ್‌ನಲ್ಲಿ ಬಂಧಿಸಿಡಲಾಗಿದೆ: ಪ್ರತೀಕ್‌ ಸಿನ್ಹಾ ಟ್ವೀಟ್

Update: 2022-06-27 17:17 GMT

ಹೊಸದಿಲ್ಲಿ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂಬ ಆರೋಪದ ಮೇರೆಗೆ ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ರನ್ನು ದಿಲ್ಲಿ ಪೊಲೀಸರು ಬಂಧಿಸಿದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಝುಬೈರ್‌ರನ್ನು ಪೊಲೀಸರು ಅಪರಿಚಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಪ್ರತೀಕ್‌ ಸಿನ್ಹಾ ಟ್ವೀಟ್‌ ಮಾಡಿದ್ದಾರೆ. 

"ವೈದ್ಯಕೀಯ ಪರೀಕ್ಷೆಯ ನಂತರ ಝುಬೈರ್‌ ರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಝುಬೈರ್ ಅವರ ವಕೀಲರು ಅಥವಾ ನನಗೆ ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳುತ್ತಿಲ್ಲ. ನಾವು ಅವರೊಂದಿಗೆ ಪೊಲೀಸ್ ವ್ಯಾನ್‌ನಲ್ಲಿದ್ದೇವೆ. ಯಾವುದೇ ಪೋಲೀಸರು ಯಾವುದೇ ನಾಮಫಲಕ ಧರಿಸಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

ಬಳಿಕ ಮತ್ತೊಂದು ಟ್ವೀಟ್‌ ಮಾಡಿದ ಅವರು, "ಝುಬೈರ್ ಪ್ರಕರಣದಲ್ಲಿ ಎಫ್‌ಐಆರ್ ಅಥವಾ ರಿಮಾಂಡ್ ಅರ್ಜಿಯ ಪ್ರತಿ ಸೇರಿದಂತೆ ಯಾವುದೇ ಮಾಹಿತಿಯನ್ನು ಒದಗಿಸದೆ, ಅವರನ್ನು ಬುರಾರಿಯಲ್ಲಿರುವ ಡ್ಯೂಟಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ನಮಗೆ ತಿಳಿಸಲಾಗಿದೆ. ಸದ್ಯ ಅವರನ್ನು ಬುರಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸ್ ಬಸ್‌ನೊಳಗೆ ಬಂಧಿಸಿಡಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. 

"ಈ ಸಂದರ್ಭದಲ್ಲಿ ಝುಬೈರ್‌ರನ್ನು ದ್ವಾರಕಾದಿಂದ ಬುರಾರಿಯಲ್ಲಿರುವ ಡ್ಯೂಟಿ ಮ್ಯಾಜಿಸ್ಟ್ರೇಟ್‌ನ ನಿವಾಸಕ್ಕೆ ಕರೆತರಲು ದಿಲ್ಲಿ ಪೊಲೀಸರು ಏಕೆ ಆತುರಪಡುತ್ತಿದ್ದಾರೆ ಎಂದು ನಾನು ಆಶ್ಚರ್ಯಪಡುತ್ತಿದ್ದೇನೆ. ನಾಳೆ ಮಧ್ಯಾಹ್ನದವರೆಗಾದರೂ ಕಾದು, 24 ಗಂಟೆ ಕೊನೆಯಾಗುವ ಮೊದಲು ಅವರನ್ನು ಸಾಮಾನ್ಯ ನ್ಯಾಯಾಲಯದ ಮುಂದೆ ಏಕೆ ಹಾಜರುಪಡಿಸಬಾರದು?" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News