ʼಝುಬೈರ್‌ ಬಂಧನ ಸತ್ಯದ ಮೇಲಿನ ಆಕ್ರಮಣʼ: ಮಹುವಾ ಮೊಯಿತ್ರಾ, ಶಶಿ ತರೂರ್‌ ಸೇರಿದಂತೆ ಹಲವು ಗಣ್ಯರ ವಿರೋಧ

Update: 2022-06-28 02:02 GMT

ಹೊಸದಿಲ್ಲಿ: ಆಲ್ಟ್‌ನ್ಯೂಸ್‌ ಪತ್ರಕರ್ತ, ಸತ್ಯಶೋಧಕ ಮಹಮ್ಮದ್‌ ಝುಬೈರ್‌ ಅವರ ಬಂಧನವು ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌, ಮಾಜಿ ಐಪಿಎಸ್ ಅಧಿಕಾರಿ ಆರ್‌ಬಿ ಶ್ರೀ ಕುಮಾರ್‌ ಅವರ ಬಂಧನವು ಬಿಜೆಪಿಯ ʼಸೇಡಿನ ರಾಜಕಾರಣʼದ ಕುರಿತಾಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು. ಅದರ ಬೆನ್ನಲ್ಲೇ, ಧ್ವೇಷ ಭಾಷಣಗಳು ಹಾಗೂ ಸುಳ್ಳು ಸುದ್ದಿಗಳ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುತ್ತಿದ್ದ ಝುಬೈರ್‌ ನನ್ನು ಬಂಧಿಸಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ದ್ವೇಷ ಹಾಗು ಸುಳ್ಳು ಹರಡುವವರನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟು, ಅವರಿಗೆ ಸುರಕ್ಷತೆ ಒದಗಿಸಿ, ಸುಳ್ಳಿನ ಬಂಡವಾಳ ಬಯಲು ಮಾಡುವ, ಸತ್ಯ ಹೇಳುವ ಪತ್ರಕರ್ತರಿಗೆ ಬಂಧನದ ಶಿಕ್ಷೆ ನೀಡಲಾಗುತ್ತಿದೆ ಎಂದು ಹಿರಿಯ ರಾಜಕಾರಣಿಗಳು, ಪತ್ರಕರ್ತರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. #IStandWithZubair ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಕೇವಲ ಒಬ್ಬ ಫಾಲೋವರ್ ಇರುವ ಟ್ವಿಟರ್ ಖಾತೆಯೊಂದು ಝುಬೇರ್ ವಿರುದ್ಧ ದೂರು ಟ್ವೀಟ್ ಮಾಡಿದ್ದಕ್ಕೆ ಝುಬೇರ್ ರನ್ನು ಬಂಧಿಸಲಾಗಿದೆ. ಆದರೆ ಜೆ ಎನ್ ಯು ನಲ್ಲಿ ಹಿಂಸಾಚಾರ ಮಾಡಿದ ವಿಡಿಯೋ ಸಾಕ್ಷ್ಯ ಇರುವ ಕೋಮಲ್ ಶರ್ಮ ವಿರುದ್ಧ ಈವರೆಗೂ ಯಾವುದೇ ಕ್ರಮವಿಲ್ಲ. ನಮ್ಮ ಇಡೀ ವ್ಯವಸ್ಥೆಒಂದು ಜೋಕ್ ಆಗಿಬಿಟ್ಟಿದೆ ಎಂದು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಟ್ವೀಟ್ ಮಾಡಿದ್ದಾರೆ.

ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಯ ಹಿಂದಿರುವ ವಾಸ್ತವಗಳನ್ನು ಭಾರತದ ಕೆಲವು ಸತ್ಯ ಪರಿಶೀಲನಾ ಸೇವೆಗಳು ಮಾಡುತ್ತಿವೆ, ವಿಶೇಷವಾಗಿ ಆಲ್ಟ್‌ ನ್ಯೂಸ್.‌ ಝುಬೈರ್‌ ಅವರ ಬಂಧನವು ಸತ್ಯದ ಮೇಲಿನ ಆಕ್ರಮಣವಾಗಿದೆ, ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಸಂಸದ ಶಶಿ ತರೂರ್‌ ಟ್ವೀಟ್‌ ಮಾಡಿದ್ದಾರೆ.

(ಧ್ವೇಷ ಭಾಷಣದ ವಿರುದ್ಧ) ಕೆಂಪು ಬಾವುಟವನ್ನು ಎತ್ತಿದ ಮತ್ತು ದ್ವೇಷದ ಭಾಷಣದ ಹಲವಾರು ನಿದರ್ಶನಗಳನ್ನು ಬಹಿರಂಗಪಡಿಸಿದ್ದ ಮಹಮ್ಮದ್ ಝುಬೈರ್ ಈಗ ದ್ವೇಷದ ಭಾಷಣದ ಆರೋಪದಲ್ಲಿ ಮತ್ತು ಸ್ವತಃ ಬಂಧಿಸಲ್ಪಟ್ಟಿದ್ದಾರೆ. ಅವರು ಬಹಿರಂಗಪಡಿಸಿದ (ಧ್ವೇಷ ಭಾಷಣಕೋರರಲ್ಲಿ) ಅನೇಕರು ಮುಕ್ತವಾಗಿ ತಿರುಗಾಡುತ್ತಾರೆ ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್‌ ದೇಸಾಯಿ ಟ್ವೀಟ್‌ ಮಾಡಿದ್ದಾರೆ.

ಝುಬೈರ್ ಬಂಧನವು ಅತ್ಯಂತ ಖಂಡನೀಯ. ಯಾವುದೇ ಸೂಚನೆ ಇಲ್ಲದೆ ಮತ್ತು ಅಪರಿಚಿತ ಎಫ್‌ಐಆರ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಪ್ರಕ್ರಿಯೆಯ ಸಂಪೂರ್ಣ ಉಲ್ಲಂಘಿಸಲಾಗಿದೆ. ದಿಲ್ಲಿ ಪೊಲೀಸ್ ಮುಸ್ಲಿಂ ವಿರೋಧಿ ನರಮೇಧದ ಘೋಷಣೆಗಳ ಬಗ್ಗೆ ಏನನ್ನೂ ಮಾಡುವುದಿಲ್ಲ. ಆದರೆ ದ್ವೇಷದ ಭಾಷಣವನ್ನು ವರದಿ ಮಾಡುವ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವ "ಅಪರಾಧ" ವಿರುದ್ಧ ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಸದ ಅಸದುದ್ದೀನ್‌ ಓವೈಸಿ ಟ್ವೀಟ್‌ ಮಾಡಿದ್ದಾರೆ.

ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳನ್ನು ಬಂಧಿಸಬೇಕೆಂದು ಝುಬೈರ್ ಬಯಸಿದ್ದರು ಮತ್ತು ಇಂದು ಧಾರ್ಮಿಕ ಸಂವೇದನೆಯನ್ನು ಕೆರಳಿಸಿದ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ. ಧಾರ್ಮಿಕ ಸಂವೇದನೆಗಳಿಗೆ ಧಕ್ಕೆ ತಂದಿರುವ ಯಾರನ್ನಾದರೂ ಬಂಧಿಸುವುದು ನನಗೆ ಬೇಕಾಗಿಲ್ಲ ಅಥವಾ ನಾನು ಬಯಸಿಲ್ಲ. ನಾನು ಝುಬೈರ್ ಪರ ನಿಂತಿದ್ದೇನೆ ಎಂದು ಅಂಕಣಗಾರ, ಲೇಖಕ ಆನಂದ್‌ ರಂಗನಾಥನ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News