ಇ-ಬಿಲ್ ವ್ಯವಸ್ಥೆ ಪ್ರೋತ್ಸಾಹಿಸಿ

Update: 2022-06-27 18:30 GMT

ಮಾನ್ಯರೇ,
 
ಸರಕಾರ ಕಾಗದ ರಹಿತ ವ್ಯವಹಾರವನ್ನು ಉತ್ತೇಜಿಸಲು, ಆದಷ್ಟು ಮಟ್ಟಿಗೆ ಕಾಗದ ಬಳಕೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ರಾಜ್ಯಗಳ ವಿಧಾನಸಭಾ ಅಧಿವೇಶನದಲ್ಲಿಯೂ ಕಾಗದ ರಹಿತ ವರದಿ ಮಂಡಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಪ್ರಕ್ರಿಯೆ, ಸರಕಾರದ ಮಟ್ಟದಲ್ಲಾದರೆ ಸಾಲದು, ಜನಸಾಮಾನ್ಯರ ಪ್ರತಿಯೊಂದು ವ್ಯವಹಾರಗಳಲ್ಲಿಯೂ ಕಡ್ಡಾಯಗೊಳಿಸುವ ಅವಶ್ಯಕತೆ ಇದೆ. ಯಾಕೆಂದರೆ ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಮುಂತಾದ ಅನೇಕ ಕಡೆಗಳಲ್ಲಿ ಕಡ್ಡಾಯವಾಗಿ ಕಾಗದದ ಬಿಲ್‌ಗಳನ್ನೇ ನೀಡುತ್ತಾರೆ. ಉದಾಹರಣೆಗೆ, ನನಗೆ ಗೊತ್ತಿರುವ ಮೆಡಿಕಲ್ ಶಾಪ್ ಒಂದರಲ್ಲಿ ಒಂದು ರೂಪಾಯಿ ಗುಳಿಗೆ ತೆಗೆದುಕೊಂಡರೂ ಕೂಡ ಮಾರುದ್ದ ಬಿಲ್ ನೀಡುತ್ತಾರೆ. ಒಂದು ರೂಪಾಯಿಗೂ ಇಷ್ಟುದ್ದ ಬಿಲ್ ನೀಡಿದರೆ ಹೇಗೆ ಎಂಬ ಪ್ರಶ್ನೆಯನ್ನಿತ್ತರೆ, ‘‘ಅಣ್ಣಾ, ಬಿಲ್ ನೀಡದೆ ಇದ್ದರೆ ಕೆಲಸದಿಂದ ತೆಗೆಯುತ್ತಾರೆ. ನಮ್ಮ ಮೇಲಧಿಕಾರಿಗಳಿಗೆ ಮನವಿ ಮಾಡಿ’’ ಎಂದರು. ಹೀಗೆ ಹುಡುಕುತ್ತಾ ಹೋದರೆ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಮೂಗಿಗಿಂತ ಮೂಗುತಿಯೇ ಭಾರ ಎಂಬಂತೆ ಒಂದು ರೂಪಾಯಿ ಗುಳಿಗೆಗೂ ಮಾರುದ್ದ ಬಿಲ್ ನೀಡುವ ಅವಶ್ಯಕತೆ ಇದೆಯೇ? ಕಾಗದದ ಬಿಲ್ ನೀಡುವ ಬದಲು, ಬಿಲ್‌ನ ಮೊತ್ತ, ವಿವರ ಮೊಬೈಲ್‌ಗೆ ಸೀದಾ ಮೆಸೇಜ್ ಬರುವಂತೆ ಜಾರಿಗೊಳಿಸಿದರೆ ಇನ್ನೂ ಅನುಕೂಲ. ವಾರ್ಷಿಕವಾಗಿ ಸಾವಿರಾರು ಟನ್ ಪೇಪರ್ ಬಳಕೆ ಕಡಿಮೆಯಾಗುತ್ತದೆ. ರಾಜ್ಯಸರಕಾರ ಕಾಗದ ಸಹಿತ ವ್ಯವಹಾರವನ್ನು ಕಡಿಮೆ ಮಾಡಿ, ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಇ-ಬಿಲ್ ವ್ಯವಸ್ಥೆ ಪ್ರೋತ್ಸಾಹಿಸಲು ಚಿಂತನೆ ನಡೆಸಬೇಕಾಗಿದೆ. 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News