ಪಂಜಾಬ್: ಎಎಪಿ ಪ್ರಥಮ ಬಜೆಟ್‍ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಘೋಷಣೆ

Update: 2022-06-28 02:00 GMT
Photo: PTI

ಚಂಡೀಗಢ: ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಾರ್ಟಿ(ಎಎಪಿ) ಸರ್ಕಾರ ತನ್ನ ಚೊಚ್ಚಲ ಬಜೆಟನ್ನು ಸೋಮವಾರ ಮಂಡಿಸಿದ್ದು, 'ನವ ಪಂಜಾಬ್' ನಿರ್ಮಾಣಕ್ಕೆ ಪಣ ತೊಟ್ಟಿದೆ. ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಜುಲೈ ಒಂದರಿಂದ ಎಲ್ಲ ಕುಟುಂಬಗಳಿಗೆ 300 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಪ್ರಕಟಿಸಲಾಗಿದೆ. ಯಾವುದೇ ಹೊಸ ತೆರಿಗೆಯನ್ನು ವಿಧಿಸದ ಬಜೆಟ್‍ನಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಆಮ್ ಆದ್ಮಿ ಪಕ್ಷದ ಇನ್ನೊಂದು ದೊಡ್ಡ ಆಶ್ವಾಸನೆಯಾಗಿದ್ದ ಪ್ರತಿ ಮಹಿಳೆಯರಿಗೆ ಮಾಸಿಕ 1000 ರೂಪಾಯಿ ನೀಡುವ ಬಗ್ಗೆ 1.5 ಲಕ್ಷ ಕೋಟಿ ರೂಪಾಯಿಯ ಬಜೆಟ್‍ನಲ್ಲಿ ಪ್ರಸ್ತಾವ ಇಲ್ಲ. ಹಣಕಾಸು ಸಚಿವ ಹರಪಾಲ್ ಸಿಂಗ್ ಚೀಮಾ ಅವರು ಈ ಬಜೆಟನ್ನು 'ಗೇಮ್‍ಚೇಂಜರ್' ಎಂದು ಬಣ್ಣಿಸಿದ್ದಾರೆ. ಉಚಿತ ವಿದ್ಯುತ್ ಯೋಜನೆಯಿಂದ ರಾಜ್ಯ ಬೊಕ್ಕಸಕ್ಕೆ 1800 ಕೋಟಿ ರೂಪಾಯಿ ಹೊರೆಯಾಗಲಿದ್ದು, ಅನಗತ್ಯ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಮತ್ತು ಆದಾಯ ಹೆಚ್ಚಿಸುವ ಮೂಲಕ ಇದನ್ನು ಹೊಂದಿಸಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಶಾಲಾ ಮತ್ತು ಉನ್ನತ ಶಿಕ್ಷಣದ ಮೇಲಿನ ಅನುದಾರವನ್ನು ಶೇಕಡ 16.2ರಷ್ಟು ಹೆಚ್ಚಿಸಲಾಗಿದ್ದು, ತಾಂತ್ರಿಕ ಶಿಕ್ಷಣಕ್ಕೆ ಶೇಕಡ 48, ವೈದ್ಯಕೀಯ ಶಿಕ್ಷಣಕ್ಕೆ ಶೇಕಡ 57ರಷ್ಟು ಅನುದಾರ ಹೆಚ್ಚಿಸಲಾಗಿದೆ. ಆರೋಗ್ಯ ಕ್ಷೇತ್ರದ ಅನುದಾನವನ್ನು ಶೇಕಡ 23.8ರಷ್ಟು ಹೆಚ್ಚಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 16 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಭರವಸೆ ನೀಡಲಾಗಿದ್ದು, "ಪ್ರಖ್ಯಾತ ಶಾಲೆಗಳಿಗೆ" 200 ಕೋಟಿ ರೂಪಾಯಿ ಕೊಡುಗೆಯನ್ನೂ ಘೋಷಿಸಲಾಗಿದೆ. ಸರ್ಕಾರಿ ಶಾಲೆಗಳ ಗಂಪಿಗೆ "ಎಸ್ಟೇಟ್ ಮ್ಯಾನೇಜರ್"ಗಳನ್ನು 123 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ 108 ಕೋಟಿ ನಿಗದಿಪಡಿಸಲಾಗಿದ್ದು, ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಅಪರಾಧ ನಿಯಂತ್ರಣ ಕೊಠಡಿ ನಿರ್ಮಾಣಕ್ಕೆ 30 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News