ಶಿವಸೇನೆಯ ಇತಿಹಾಸ

Update: 2022-06-28 07:13 GMT

ಭಾಗ -1

ತನ್ನ ಆಕ್ರಮಣಕಾರಿ ತತ್ವಗಳಿಗೆ ಅನುಗುಣವಾಗಿ ಘರ್ಜಿಸುವ ಹುಲಿಯನ್ನು ಪಕ್ಷದ ಚಿಹ್ನೆಯನ್ನಾಗಿಯೂ, ಬಿಲ್ಲು ಬಾಣವನ್ನು ಚುನಾವಣಾ ಚಿಹ್ನೆಯನ್ನಾಗಿಯೂ ಹೊಂದಿರುವ ಶಿವಸೇನೆಯ ಇತಿಹಾಸವನ್ನು ದೇಶದಲ್ಲಿ ಹಿಂದುತ್ವ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೋಡಬೇಕು. ಯಾಕೆಂದರೆ, ಇಂದು ದೇಶದಾದ್ಯಂತ ಬಿಜೆಪಿಯೊಳಗೆ ಬೆಳೆಯುತ್ತಿರುವ- ಮರಾಠಿಯಲ್ಲಿ ಟಪೋರಿ ಅಂದರೆ, ಹಾದಿಬೀದಿಯ ಪುಂಡ ಹಿಂದುತ್ವಕ್ಕೆ ಮಾದರಿಯಾಗಿರುವುದೇ ಶಿವಸೇನೆ. ಆದುದರಿಂದಲೇ ಇದನ್ನು ಅರ್ಥ ಮಾಡಿಕೊಳ್ಳಲು ಶಿವಸೇನೆಯ ಇತಿಹಾಸವನ್ನು ನೋಡುವುದು ಅಗತ್ಯ.

ಮಹಾರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹ ಶಕ್ತಿಯಾಗಿ ಬೆಳೆದುಬಂದಿರುವ ಶಿವಸೇನೆಯು ಮೂಲತಃ ಒಂದು ಪ್ರಾದೇಶಿಕ, ಹಿಂದೂ ರಾಷ್ಟ್ರವಾದಿ, ತೀವ್ರ ಬಲಪಂಥೀಯ ರಾಜಕೀಯ ಪಕ್ಷ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅಧಿಕಾರಕ್ಕಾಗಿ ಇತ್ತೀಚೆಗಷ್ಟೇ ಸ್ವಲ್ಪಸೌಮ್ಯ ನಿಲುವು ತೋರಿಸಿದ್ದರೂ, ಅದರೊಳಗಿನ ತೀವ್ರ ಹಿಂದುತ್ವವಾದಿ ಶಕ್ತಿಗಳು ಬಿಜೆಪಿಯ ಪ್ರಚೋದನೆಯಿಂದ ಮತ್ತೆ ಹೆಡೆಯೆತ್ತಿವೆ. ಇದಕ್ಕೆ ಮೂಲಕಾರಣ ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆಯವರು ಭಾಷಣವೊಂದರಲ್ಲಿ ಬಿಜೆಪಿಯನ್ನು, ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್‌ನ್ನು ಕಟುವಾಗಿ ಟೀಕಿಸಿದ್ದು. ಇದೀಗ ಪಕ್ಷ ಅದರ ಇತಿಹಾಸದಲ್ಲೇ ಮೂರನೇ ದೊಡ್ಡ ಆಂತರಿಕ ಬಂಡಾಯ ಎದುರಿಸಿದೆ.

ತನ್ನ ಆಕ್ರಮಣಕಾರಿ ತತ್ವಗಳಿಗೆ ಅನುಗುಣವಾಗಿ ಘರ್ಜಿಸುವ ಹುಲಿಯನ್ನು ಪಕ್ಷದ ಚಿಹ್ನೆಯನ್ನಾಗಿಯೂ, ಬಿಲ್ಲು ಬಾಣವನ್ನು ಚುನಾವಣಾ ಚಿಹ್ನೆಯನ್ನಾಗಿಯೂ ಹೊಂದಿರುವ ಶಿವಸೇನೆಯ ಇತಿಹಾಸವನ್ನು ದೇಶದಲ್ಲಿ ಹಿಂದುತ್ವ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೋಡಬೇಕು. ಯಾಕೆಂದರೆ, ಇಂದು ದೇಶದಾದ್ಯಂತ ಬಿಜೆಪಿಯೊಳಗೆ ಬೆಳೆಯುತ್ತಿರುವ- ಮರಾಠಿಯಲ್ಲಿ ಟಪೋರಿ ಅಂದರೆ, ಹಾದಿಬೀದಿಯ ಪುಂಡ ಹಿಂದುತ್ವಕ್ಕೆ ಮಾದರಿಯಾಗಿರುವುದೇ ಶಿವಸೇನೆ. ಆದುದರಿಂದಲೇ ಇದನ್ನು ಅರ್ಥ ಮಾಡಿಕೊಳ್ಳಲು ಶಿವಸೇನೆಯ ಇತಿಹಾಸವನ್ನು ನೋಡುವುದು ಅಗತ್ಯ.

ಹೊಸ ರಾಜಕೀಯ ಕಥನ

ಶಿವಸೇನೆ ಹುಟ್ಟಿದಾಗ ಅದು ಮಹಾರಾಷ್ಟ್ರದಲ್ಲಿ ಒಂದು ಹೊಸ ರಾಜಕೀಯ ಕಥನ ಅಥವಾ ಪರಿಕಲ್ಪನೆಯನ್ನೇ ರೂಪಿಸಿತು. ಅದೆಂದರೆ, ಮರಾಠರ ಹಕ್ಕು ಮತ್ತು ಹಿಂದೂ ರಾಷ್ಟ್ರೀಯತೆ. ಅದಕ್ಕೆಂದೇ ರೂಪಿತವಾದ ಘೋಷಣೆ ‘‘ಮರಾಠಿ ಮಾಣುಸ್’’- ಎಂದರೆ ಮರಾಠಿ ಮನುಷ್ಯ. ‘‘ಅಮ್ಚಿ ಮಾಠಿ, ಅಮ್ಚಿ ಮಾಣುಸ್’’- ಎಂದರೆ, ‘‘ನಮ್ಮ ಮಣ್ಣು, ನಮ್ಮ ಜನ’’ ಎಂಬುದು ಇಂದಿಗೂ ಅಲ್ಲಿ ಜನಪ್ರಿಯ ಘೋಷಣೆ. ‘‘ಅಮ್ಚಿ ಮುಂಬೈ’’ ಕೂಡಾ ಇದೇ ಬ್ರಾಂಡ್‌ನದ್ದು. ಇದಕ್ಕೆ ಸಂಕೇತವಾಗಿ ಬಳಸಿದ್ದು, ಇಂದು ಹಿಂದೂ ಹೋರಾಟಗಾರ ಎಂದು ಸಂಘಪರಿವಾರವು ಸುಳ್ಳಾಗಿ ಬಿಂಬಿಸುತ್ತಿರುವ ಮರಾಠಾ ಸ್ವಾಭಿಮಾನದ ಸಂಕೇತವಾದ ಶಿವಾಜಿಯನ್ನು. ಅದಕ್ಕೆಂದೇ ಪಕ್ಷದ ಹೆಸರು ಶಿವಸೇನೆ. ಪಕ್ಷದ ಬೆಳವಣಿಗೆಯ ಗುರಿ ಅಸಂಖ್ಯಾತ ನಿರುದ್ಯೋಗಿ, ಹತಾಶ ಯುವಜನರಾಗಿದ್ದರೆ, ಆಕ್ರಮಣದ ಗುರಿ ಮೂಲತಃ ದಕ್ಷಿಣ ಭಾರತೀಯರು ಹಾಗೂ ನಂತರದಲ್ಲಿ ಹಿಂದಿ ಭಾಷಿಕರು ಮತ್ತು ಸಾಮಾನ್ಯವಾಗಿ ಮುಸ್ಲಿಮರು. ಪಕ್ಷಕ್ಕೆ ಪ್ರೇರಣೆ: ಆರೆಸ್ಸೆಸ್ ಮತ್ತು ಹಿಟ್ಲರ್. ಹಿಟ್ಲರನ ಕುಖ್ಯಾತ ಗೂಂಡಾ ಸೈನಿಕ ಪಡೆ ವಾಫೆನ್ ಎಸ್.ಎಸ್. ಮತ್ತು ಶಿವಸೇನೆಯ ಹೆಸರಿನ ಸಂಕ್ಷಿಪ್ತ ರೂಪ ಎಸ್.ಎಸ್. ಒಂದೇ ಆಗಿರುವುದು ಕಾಕತಾಳೀಯವೇನಲ್ಲ. ಇಂದು ಬಿಜೆಪಿಯ ಉಗ್ರವಾದಿ ಮುಖವಾಗಿರುವ ಬಜರಂಗದಳ ಇತ್ಯಾದಿಗಳ ಈಗಿನ ರೂಪವೇ ಶಿವಸೇನೆಯ ಹಿಂದಿನ ರೂಪ. ಶಿವಸೇನೆಯು ಬಿಜೆಪಿಯಿಂದ ದೂರವಾಗಲು ಮೂಲಕಾರಣವೇ ಇಂತಹ ಶಕ್ತಿಗಳು ಪ್ರಾದೇಶಿಕವಾದ ಶಿವಸೇನೆಯಿಂದ, ರಾಷ್ಟ್ರೀಯವೂ, ಲಾಭದಾಯಕವೂ ಆದ ಬಿಜೆಪಿಯ ಕಡೆಗೆ ಆಕರ್ಷಿತವಾದದ್ದು. ಮಿತ್ರಪಕ್ಷಗಳನ್ನು ನುಂಗಿ ನೀರು ಕುಡಿಯುವುದರಲ್ಲಿ ಬಿಜೆಪಿ ಎತ್ತಿದ ಕೈ ಎಂಬುದಕ್ಕೆ ಹತ್ತಿರದ ಉದಾಹರಣೆ ಎಂದರೆ, ಗೋವಾದ ಪ್ರಬಲ ಬಲಪಂಥೀಯ ಪಕ್ಷವಾಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ.

ದೇಶದಲ್ಲಿ ತೀವ್ರವಾದಿ ಹಿಂದುತ್ವದ ಬೆಳವಣಿಗೆಗೆ ಕಾರಣಗಳೇನು ಮತ್ತು ನಮ್ಮ ಪರಿಸ್ಥಿತಿಗೂ- ಶಿವಸೇನೆಯು ಬಿಜೆಪಿಗಿಂತಲೂ ಹಿಂದೆಯೇ ಪ್ರಬಲವಾಗಿ ಬೆಳೆದ ಐತಿಹಾಸಿಕ ಪರಿಸ್ಥಿತಿಗೂ ಸಾಮ್ಯವಿದೆಯೇ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಅದನ್ನು ಚುಟುಕಾಗಿ ನೋಡೋಣ.

ಶಿವಸೇನೆಯ ಹಿನ್ನೆಲೆ

 ಸ್ವಾತಂತ್ರ್ಯದ ಬಳಿಕ ಉಳಿದ ಬ್ರಿಟಿಷ್ ಕಾಲದ ಪ್ರೆಸಿಡೆನ್ಸಿಗಳಲ್ಲಿ ಮತ್ತು ರಾಜರು ಆಳುತ್ತಿದ್ದ ರಾಜ್ಯಗಳಲ್ಲಿ ಬೇರೆಬೇರೆ ಭಾಷೆಗಳನ್ನು ಮಾತನಾಡುವ ಪ್ರದೇಶಗಳಿದ್ದವು. ಕರ್ನಾಟಕ ಏಕೀಕರಣ ಚಳವಳಿ ನಡೆದಂತೆ ಮಹಾರಾಷ್ಟ್ರದಲ್ಲೂ ಹಿಂಸಾತ್ಮಕವಾದ ಮಹಾರಾಷ್ಟ್ರ ಏಕೀಕರಣ ಚಳವಳಿ ನಡೆಯಿತು. ಮುಂಬೈಯಲ್ಲಿ ಈಗಿನಂತೆ ಆಗಲೂ ಶ್ರೀಮಂತ ಗುಜರಾತಿಗಳ ಪ್ರಾಬಲ್ಯವಿತ್ತು. ಏಕೀಕರಣ ಚಳವಳಿಯನ್ನು ನಿರ್ದಯವಾಗಿ ದಮನಿಸಿದವರು ನಂತರ ಪ್ರಧಾನಿಯಾದ ಗುಜರಾತಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಎಂಬುದನ್ನು ಗಮನಿಸಬೇಕು. 1960ರಲ್ಲಿ ಬಾಂಬೆ ಪ್ರೆಸಿಡೆನ್ಸಿಯನ್ನು ಒಡೆದು ಮಹಾರಾಷ್ಟ್ರ ಮತ್ತು ಗುಜರಾತ್ ಭಾಷಾವಾರು ರಾಜ್ಯಗಳ ಸ್ಥಾಪನೆಯಾಯಿತು. ನಿಜಾಮನ ಹೈದರಾಬಾದ್ ಪ್ರಾಂತದ ಮರಾಠಿ ಭಾಷಿಕ ಪ್ರದೇಶಗಳೂ ಸೇರಿ, ಮುಂಬೈ ರಾಜಧಾನಿಯಾಯಿತು. ಆದರೆ, ರಾಜಧಾನಿಯಲ್ಲಿ ಶ್ರೀಮಂತ ವ್ಯಾಪಾರಿ ಗುಜರಾತಿಗಳದ್ದೇ ಕಾರುಬಾರು. ಜೊತೆಗೆ ಮುಂಬೈ ಕೈಗಾರಿಕಾ-ವಾಣಿಜ್ಯ ನಗರವಾಗಿ ಬೆಳೆದಿದ್ದುದರಿಂದ ದಕ್ಷಿಣ ಭಾರತೀಯರೂ ಸೇರಿದಂತೆ ಎಲ್ಲಾ ಕಡೆಗಳ ಜನರು ಉದ್ಯೋಗ ಅರಸಿ ಮುಂಬೈ ಸೇರಿದ್ದರು. ನಿರುದ್ಯೋಗ ತಾಂಡವವಾಡುತ್ತಿದ್ದುದರಿಂದ ಈ ಕುರಿತು ಮರಾಠಿಗರಲ್ಲಿ ತೀವ್ರವಾದ ಅಸಮಾಧಾನವಿತ್ತು. ಅಸೂಯೆ ಮನೆ ಮಾಡಿತ್ತು.

ಸ್ಥಾಪನೆ

ಇದನ್ನೇ ಬಂಡವಾಳ ಮಾಡಿಕೊಂಡ ಬಾಳಾ ಠಾಕ್ರೆ ಜೂನ್ 19, 1966ರಲ್ಲಿ ಶಿವಸೇನೆಯನ್ನು ಒಂದು ರಾಜಕೀಯ ಪಕ್ಷವಾಗಿ ಸ್ಥಾಪನೆ ಮಾಡಿದರು. ಇದನ್ನು ಅವರು ಒಮ್ಮೆಗೇ ಮಾಡಲಿಲ್ಲ. ಮರಾಠಾ ಮತ್ತು ಬಲಪಂಥೀಯ ಚಿಂತಕರಾಗಿ ಸ್ವಲ್ಪಹೆಸರು ಮಾಡಿದ್ದ ಪ್ರಬೋಧನ್‌ಕರ್ ಠಾಕ್ರೆ ಅವರ ಮಗನಾದ ಬಾಳಾ ಠಾಕ್ರೆ ಆಗ ಪ್ರಖ್ಯಾತವಾಗಿದ್ದ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದು, ಅತ್ಯುತ್ತಮ ಗೆರೆಗಳ ಪ್ರಖರ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ನಂತರ ರಾಜೀನಾಮೆ ನೀಡಿ ‘ಮಾರ್ಮಿಕ್’ ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಇದರಲ್ಲಿ ಆವರು ಬರೆಯುತ್ತಿದ್ದ ಕಟುವಾದ ರಾಜಕೀಯ ವ್ಯಂಗ್ಯಚಿತ್ರಗಳು ಮತ್ತು ವಿಡಂಬನೆಗಳೇ ಪ್ರಮುಖವಾಗಿದ್ದವು. ಇದು ಜನಪ್ರಿಯವಾಯಿತು. ಮುಂದೆ ಶಿವಸೇನೆಯು ಬಳಸಿದ ದಕ್ಷಿಣ ಭಾರತೀಯ ವಿರೋಧಿ ‘‘ಲುಂಗಿ ಬಗಾವೋ, ಪುಂಗಿ ಬಜಾವೋ’’ ಅಥವಾ ‘‘ಲುಂಗಿ ಓಡಿಸಿ, ಪುಂಗಿ ಬಾರಿಸಿ’’ ಎಂಬ ಪ್ರಚೋದನಾತ್ಮಕ ಘೋಷಣೆಯ ಮೂಲ ಇರುವುದು ಇಲ್ಲಿಯೇ. ಆ ಕಾಲದಲ್ಲಿ ದಕ್ಷಿಣ ಭಾರತೀಯರು, ಮುಖ್ಯವಾಗಿ ತಮಿಳರು ಲುಂಗಿ ಧರಿಸಿದರೆ, ಮರಾಠಿ ಮತ್ತಿತರು ಕಚ್ಚೆ ಅಥವಾ ಪೈಜಾಮ ಮತ್ತು ಬಿಳಿ ದೋಣಿ ಟೊಪ್ಪಿ ಧರಿಸುತ್ತಿದ್ದರು. ಇದನ್ನು ತುಳುವರು ‘‘ಓಡ ಕಂಕಣೆ ಪಾಡ್ದಿನಿ’’ ಎಂದರೆ, ‘‘ದೋಣಿ ಮಗುಚಿ ಹಾಕಿದ್ದು’’ ಎಂದು ತಮಾಷೆ ಮಾಡುತ್ತಿದ್ದರು. ಇದನ್ನು ಹೇಳುವ ಕಾರಣ ಎಂದರೆ, ಒಳಗೊಳಗೇ ಹೊಗೆಯಾಡುತ್ತಿದ್ದ ಭಾಷಾ, ಪ್ರಾದೇಶಿಕ ಅಸಮಾಧಾನವನ್ನು ತೋರಿಸುವುದು. ಪ್ಯಾಂಟು ಸೂಟು ಪ್ರತಿಷ್ಠೆಯ ಸಂಕೇತವಾಗಿತ್ತು. ಈ ನೆಲೆಯಲ್ಲಿ ಜನರನ್ನು ಗುರುತಿಸಿ ದ್ವೇಷಿಸಲು ಸುಲಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರನ್ನು ಗುರಿ ಮಾಡಿ, ‘‘ಉಡುಪು ಗುರುತು ಹೇಳುತ್ತದೆ’’ ಎಂದು ಹೇಳಿಕೆ ನೀಡಿದ್ದಕ್ಕೆ ಇದೇ ಪ್ರೇರಣೆಯಾಗಿದ್ದಿರಬಹುದು.

ಹೊಸದಾಗಿ ಸ್ಥಾಪಿತ ಬಾಳಾ ಠಾಕ್ರೆಯ ಪಕ್ಷವು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗಿ ಯುವಕರನ್ನು ಆಕರ್ಷಿಸಿತು. ಶಿವಸೇನೆಯ ಕಾರ್ಯಕರ್ತರು ಮೊದಲಿಗೆ ಸರಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳನ್ನು ಬೆದರಿಸಿ, ತಮ್ಮವರಿಗೆ ಕೆಲಸ ಕೊಡಿಸಲು ಆರಂಭಿಸಿದರು. ಉದ್ಯೋಗ ಮಾರ್ಗದರ್ಶನ, ಅರ್ಜಿ ಬರೆದುಕೊಡುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಆಗ ಅಧಿಕಾರಿಗಳು ಹೆಚ್ಚಾಗಿ ಮರಾಠಿಯೇತರರೇ ಆಗಿದ್ದು, ಅವರನ್ನು ಬೆದರಿಸಿ ಮರಾಠಿ ಕಾರ್ಮಿಕರ ಪರವಾಗಿ ನಿಂತರು. ಇದರ ಜೊತೆಯಲ್ಲಿ ಕಾರ್ಯಕರ್ತರಿಗೆ ಸ್ಥಳೀಯವಾಗಿ ಗೂಂಡಾಗಿರಿ ನಡೆಸಿ ವಸೂಲಿ ಮಾಡುವ ಅವಕಾಶವೂ ಇತ್ತು. ಇವೆಲ್ಲವೂ ಹತಾಶ ಜನರನ್ನು ಮರಾಠಿ ಸ್ವಾಭಿಮಾನದ ನೆಲೆಯಲ್ಲಿ ಪಕ್ಷದ ಕಡೆಗೆ ಆಕರ್ಷಿಸಿದವು. ಜೊತೆಗೆ ಠಾಕ್ರೆಯ ಹಿಟ್ಲರ್ ಮಾದರಿಯ, ಕಂಚಿನ ಕಂಠದ, ಶತ್ರುಗಳನ್ನೂ ಮಂತ್ರಮುಗ್ಧಗೊಳಿಸುವ ಭಾಷಣಕಲೆ ಬಹಳವಾಗಿ ನೆರವಾಯಿತು. ಠಾಕ್ರೆ ಭಾಷಣಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಶಿವಸೇನೆ ಎಂದರೆ ಎಲ್ಲರೂ ಬೆದರಲು ಆರಂಭಿಸಿದರು.

ಕಮ್ಯುನಿಸ್ಟ್ ದಮನ

ಆಗ ಮುಂಬೈಯಲ್ಲಿ ಅಸಂಖ್ಯಾತ ಬಟ್ಟೆ ಮಿಲ್ಲುಗಳು ಮತ್ತು ಇತರ ಕಾರ್ಖಾನೆಗಳಿದ್ದವು. ಅವುಗಳ ಮಾಲಕರು ಮುಖ್ಯವಾಗಿ ಗುಜರಾತಿ-ಮಾರ್ವಾಡಿಗಳಾಗಿದ್ದರು. ಇಲ್ಲೆಲ್ಲಾ ಕಮ್ಯುನಿಸ್ಟ್ ನೇತೃತ್ವದ ಕಾರ್ಮಿಕ ಸಂಘಟನೆಗಳಿದ್ದವು. ಇಲ್ಲಿ ಕಮ್ಯುನಿಸ್ಟರು ಎಷ್ಟು ಪ್ರಬಲರಾಗಿದ್ದರು ಎಂದರೆ, ಹಲವಾರು ನಗರಪಾಲಿಕೆ ಸದಸ್ಯರೂ, ಶಾಸಕರೂ ಆಯ್ಕೆಯಾಗುತ್ತಿದ್ದರು. ಇದು ಕಾಂಗ್ರೆಸ್‌ಗೆ ಬೆದರಿಕೆಯಾಗಿತ್ತು. ಆಗ ಅವರನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯಲು- ಕಾಂಗ್ರೆಸ್‌ನ ಹಣದ ಚೀಲ ಎಂದರೆ, ಫಂಡ್ ರೈಸರ್ ಎಂದೇ ಹೆಸರಾಗಿದ್ಧ ಇನ್ನೊಬ್ಬ ಗುಜರಾತಿ ನಾಯಕ ರಜನಿಭಾಯ್ ಪಟೇಲ್ ಶಿವಸೇನೆಯನ್ನು ಬಳಸಿದರು ಎಂಬ ಆರೋಪವಿದೆ. ಇದಕ್ಕೆ ಗುಜರಾತಿ ಮಿಲ್ಲು ಮಾಲಕರ ಹಣಬೆಂಬಲವಿತ್ತು. ಮುಂದೆ ಶಿವಸೇನೆಗೆ ಪ್ರಬಲವಾಗಿ ಸೆಡ್ಡುಹೊಡೆದು ನಿಂತ ದಲಿತ್ ಪ್ಯಾಂಥರ್ಸ್ ಮತ್ತು ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಆರ್‌ಪಿಐ ಅಥವಾ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಾಯಕರನ್ನು ಹಣಬಲದಿಂದ ಭ್ರಷ್ಟಗೊಳಿಸಿ ಅವುಗಳು ಒಡೆದು ನುಚ್ಚುನೂರಾಗುವಂತೆ ಮಾಡಿದ ಕುಖ್ಯಾತಿಯೂ ಈ ಗುಜರಾತಿಗರಿಗೆ ಇದೆ. ಶಿವಸೇನೆಯ ಜೊತೆಗೆ ಅವರು ಭೂಗತ ಸಂಪರ್ಕ ಹೊಂದಿದ್ದ ಕಾರ್ಮಿಕ ನಾಯಕ ‘ಕಾಮ್‌ಗಾರ್ ಆಘಾಡಿ’ಯ ಡಾ. ದತ್ತಾ ಸಾಮಂತ್ ಅವರನ್ನು ಬೆಳೆಸಿದರು. ಸಾಮಂತ್ ನಂತರ ಭೂಗತ ಜಗತ್ತಿನಿಂದಲೇ ಕೊಲೆಯಾದರು.

ನಂತರದಲ್ಲಿ ಶಿವಸೇನೆಯ ‘ಕಾಮ್‌ಗಾರ್ ಸೇನಾ’ ಮತ್ತು ಸಾಮಂತ್ ಆವರ ‘ಕಾಮ್‌ಗಾರ್ ಆಘಾಡಿ’- ಕಾರ್ಮಿಕ ಸಂಘಟನೆಯ ಕ್ಷೇತ್ರಕ್ಕೆ ಭಯಾನಕವಾದ ಹಿಂಸೆಯನ್ನು ತಂದವು. ಕಮ್ಯುನಿಸ್ಟ್ ಕಾರ್ಮಿಕ ನಾಯಕರು ಒಬ್ಬರ ಬೆನ್ನಿಗೆ ಒಬ್ಬರು ಕೊಲೆಯಾಗತೊಡಗಿದರು. ಕಮ್ಯುನಿಸ್ಟರು ಬಹುತೇಕ ನಿರ್ನಾಮವಾದರು. ಇಷ್ಟಾದ ಮೇಲೆ ಶಿವಸೇನೆಯು ಕಾಂಗ್ರೆಸ್‌ಗೆ ಸಂಪೂರ್ಣವಾಗಿ ತಿರುಗಿಬಿದ್ದಿತು.

ಎಪ್ಪತ್ತರ ದಶಕದಲ್ಲಿ ಶಿವಸೇನೆಯು ಮರಾಠಿಗರನ್ನು ಪ್ರಚೋದಿಸಿ ದಕ್ಷಿಣ ಭಾರತೀಯರ ವಿರುದ್ಧ ಛೂಬಿಟ್ಟಿತು. ಶಿವಸೇನಾ ಕಾರ್ಯಕರ್ತರು ದಕ್ಷಿಣ ಭಾರತೀಯರ, ಮುಖ್ಯವಾಗಿ ಉಡುಪಿ ಹೊಟೇಲುಗಳ ಮೇಲೆ ದಾಳಿ ಆರಂಭಿಸಿದರು. 1974-75ರಲ್ಲಿ ಬೆಳಗಾವಿ ವಿಷಯದಲ್ಲಿ ಹಿಂಸಾತ್ಮಕ ಗಡಿ ಗಲಾಟೆಯನ್ನು ಎಬ್ಬಿಸಿತು. ಒಮ್ಮೆಯಂತೂ ನಾಲ್ಕು ತಿಂಗಳುಗಳ ಕಾಲ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ನಿಂತಿತ್ತು. ಕೊನೆಗೆ ಮುಂಬೈಯ ಬಂಟ ಸಮುದಾಯದವರು ತಮ್ಮ ವ್ಯಾಪಾರ ಉಳಿಸಲು ತಮ್ಮದೇ ಪಡೆಕಟ್ಟಿಕೊಂಡು ಶಿವಸೇನೆಗೆ ಸರಿಯಾದ ಎದುರೇಟು ನೀಡಿದ್ದರು. ಆಗ ಉಂಟಾದ ರಾಜಿ ಇಂದೂ ಮುಂದುವರಿದಿದ್ದು, ಬಂಟ ಸಮುದಾಯದ ಹಲವರು ಶಿವಸೇನೆಯ ಕಾರ್ಪೊರೇಟರುಗಳು, ಶಾಸಕರು ಆಗಿದ್ದಾರೆ.

ಹಿಂದುತ್ವದ ಬಂಡಿ

1968ರ ಮಾರ್ಚ್‌ನಲ್ಲಿ ನಡೆದ ಬೃಹನ್ಮುಂಬೈ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆಯು 140ರಲ್ಲಿ 42 ಸ್ಥಾನಗಳನ್ನು ಗೆದ್ದಿತು. 1968ರ ಆಗಸ್ಟ್ ತಿಂಗಳಲ್ಲಿ ಮರಾಠಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ‘ಕಾಮ್‌ಗಾರ್ ಸೇನಾ’ ಸ್ಥಾಪಿಸಿತು. ನಂತರ ನಡೆದ ಹಿಂಸಾತ್ಮಕ ಕಥಾನಕವನ್ನು ಈಗಾಗಲೇ ಚುಟುಕಾಗಿ ನೋಡಿದ್ದೀರಿ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಹಾಗೂ ನೆರೆಯ ಥಾಣೆ ಜಿಲ್ಲೆ ಬಿಟ್ಟರೆ ಇಡೀ ಮಹಾರಾಷ್ಟ್ರದಲ್ಲಿ ಅದು ಹೇಳಿಕೊಳ್ಳುವ ಪ್ರಭಾವ ಬೀರಲಿಲ್ಲ. ಹಾಗಾಗಿ, ದಕ್ಷಿಣ ಭಾರತೀಯರೂ ಹಿಂದೂಗಳು ಎಂಬುದನ್ನು ಮರೆತು ದಾಳಿ ಮಾಡಿದ್ದ ಶಿವಸೇನೆಯು ಎಚ್ಚೆತ್ತುಕೊಂಡು ಹಿಂದುತ್ವದ ಬಂಡಿಯೇರಿ ಪುಂಗಿ ಊದಲು ಆರಂಭಿಸಿತು.

1989ರ ಚುನಾವಣೆಯಲ್ಲಿ ಅದು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿತು. 1995-1999ರ ನಡುವೆ ಬಿಜೆಪಿ ಜೊತೆ ಮೈತ್ರಿ ಸರಕಾರ ನಡೆಸಿತು. ಮೊದಲ ಬಾರಿಗೆ ಶಿವಸೇನೆಯು ಮುಖ್ಯಮಂತ್ರಿ ಪದಕ್ಕೆ ಏರಿ ಮನೋಹರ ಜೋಶಿ ಮುಖ್ಯಮಂತ್ರಿಯಾದರು. 1999ರಿಂದ 2014ರ ತನಕ ಇದೇ ಕೂಟ ಪ್ರತಿಪಕ್ಷದಲ್ಲಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಜಗಳವಾಡಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದವು. ಬಿಜೆಪಿ ಅತೀದೊಡ್ಡ ಪಕ್ಷವಾಗಿ ಮೂಡಿಬಂದು, ನಂತರ ಅವು ಜೊತೆಯಾಗಿಯೇ ಸರಕಾರ ಸ್ಥಾಪಿಸಿದವು. ನಂತರ ಇವುಗಳು ಹತ್ತಿರ-ದೂರ ಆಗುತ್ತಲೇ ಇದ್ದು, ಅಂತಿಮವಾಗಿ 2014ರಲ್ಲಿ ಶಿವಸೇನೆಯು ಎನ್‌ಡಿಎಯಿಂದ ಹೊರಬಂತು.

ಪಕ್ಷದ ಬೆಳವಣಿಗೆಯಲ್ಲಿ ಬಾಳಾ ಠಾಕ್ರೆಯ ಅಣ್ಣನ ಮಗ ರಾಜ್ ಠಾಕ್ರೆ, ಸ್ವಂತ ಮಗ ಉದ್ಧವ್ ಠಾಕ್ರೆಗಿಂತ- ತನ್ನ ಚಾಣಾಕ್ಷತನ ಮತ್ತು ತಂತ್ರಗಳಿಂದ ಹೆಚ್ಚಿನ ಕೊಡುಗೆ ಸಲ್ಲಿಸಿದ್ದರು. ಬಾಳಾ ಠಾಕ್ರೆಯ ಮ್ಯಾನರಿಸಂ ಅನ್ನೇ ಅನುಸರಿಸಿ ಅದೇ ಶೈಲಿಯಲ್ಲಿ ಬಿಡು ಬೀಸು ಮಾತಾಡುವ ರಾಜ್ ಠಾಕ್ರೆ ಶಿವಸೇನೆಯ ಕಾರ್ಯಕರ್ತರ ಮನ ಗೆದ್ದಿದ್ದರು. ಆದರೆ, ಸಾಯುವ ಕಾಲಕ್ಕೆ ಬಾಳಾ ಠಾಕ್ರೆ ಸ್ವಂತ ಮಗ ಉದ್ಧವ್‌ರನ್ನೇ ಉತ್ತರಾಧಿಕಾರಿ ಎಂದು ಘೋಷಿಸಿದರು. ಇದರಿಂದ ಕೋಪಗೊಂಡ ರಾಜ್ ಠಾಕ್ರೆ ಶಿವಸೇನೆಯಿಂದ ಹೊರಬಂದು ‘ಮಹಾರಾಷ್ಟ್ರ ನವನಿರ್ಮಾಣ ಸೇನೆ’ ಸ್ಥಾಪಿಸಿದರೂ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಈಗ ಆ ಪಕ್ಷವು ಬೀದಿ ಪುಂಡಾಟಕ್ಕೆ ಸೀಮಿತವಾಗಿದೆ.

ರಾಜ್ ಠಾಕ್ರೆ ಪಕ್ಷದಲ್ಲಿ ಇರುವವರೆಗೂ ಶಿವಸೇನೆಯ ಆಕ್ರಮಣಕಾರಿ ರಾಜಕೀಯಕ್ಕೆ ಒಗ್ಗದ ನಾಯಕ ಎಂದೇ ಎಲ್ಲರೂ ಭಾವಿಸಿದ್ದ ಉದ್ಧವ್ ಠಾಕ್ರೆ ಆಶ್ಚರ್ಯಕರ ರೀತಿಯಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಿದರು. ತಂದೆಯಂತೆಯೇ ಪಕ್ಷದ ಪ್ರಭಾವಿ ನಾಯಕರು ತನ್ನ ನಾಯಕತ್ವ ಸ್ವೀಕರಿಸುವಂತೆ ಮಾಡಿದರು ಹಾಗೂ ತಳಮಟ್ಟದ ಕಾರ್ಯಕರ್ತರ ವಿಶ್ವಾಸ ಗಳಿಸಿದರು. ಜೊತೆಗೆ ಬಿಜೆಪಿ ಜೊತೆಗಿನ ಕಭೀ ಖುಷಿ ಕಭೀ ಘಮ್ ಸಂಬಂಧವನ್ನೂ ಮುಂದುವರಿಸಿದರು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ, ಮೋದಿಗೆ, ಹಿಂದುತ್ವಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಆದರೆ ಮಹಾರಾಷ್ಟ್ರದ ವಿಷಯ ಬಂದ ಕೂಡಲೇ ತಮ್ಮ ಹಿತಾಸಕ್ತಿಗೆ ಮಾತ್ರ ಆದ್ಯತೆ ನೀಡಿ ಆಗಾಗ ಬಿಜೆಪಿ ಜೊತೆ ಜಗಳ ಕಾಯುತ್ತಿದ್ದರು ಅಷ್ಟೇ. ಏಕೆಂದರೆ ರಾಜ್ಯದಲ್ಲಿ ಬಿಜೆಪಿಯನ್ನು ಸುಮ್ಮನೆ ಬಿಟ್ಟರೆ ಅದು ತಮ್ಮ ಪಕ್ಷವನ್ನೇ ಮುಗಿಸಿಬಿಡುತ್ತದೆ ಎಂಬ ಆತಂಕ ಉದ್ಧವ್‌ಗಿತ್ತು. ಆ ಭಯ ಇವತ್ತು ನಿಜವಾಗಿದೆ. 2019ರ ವಿಧಾನಸಭಾ ಚುನಾವಣೆಯನ್ನು ಶಿವಸೇನೆ-ಬಿಜೆಪಿ ಒಟ್ಟಿಗೆ ಎದುರಿಸಿದವು. ಆದರೆ ಚುನಾವಣಾ ಫಲಿತಾಂಶ ಬಂದ ಮೇಲೆ ಆಗಿದ್ದೇ ಬೇರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಬಿಜೆಪಿ - ಶಿವಸೇನೆ ನಡುವೆ ಹೊಂದಾಣಿಕೆ ಏರ್ಪಡಲಿಲ್ಲ. ಬಿಜೆಪಿಯ ಆದೇಶ ಪಾಲಿಸಲು ಶಿವಸೇನೆ ಸಿದ್ಧವಿರಲಿಲ್ಲ. ಶಿವಸೇನೆ ಹೇಳಿದ ಹಾಗೆ ಮಾಡಲು ನನಗಾಗದು ಎಂದು ಬಿಜೆಪಿ ಕೈ ಎತ್ತಿತು. ಮುನಿಸಿಕೊಂಡ ಶಿವಸೇನೆ ಎಲ್ಲರನ್ನೂ ಅಚ್ಚರಿಗೆ ಕೆಡವಿ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಜೊತೆ ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ ಹೆಸರಿನಲ್ಲಿ ಹೊಸ ಮೈತ್ರಿಕೂಟ ಮಾಡಿಕೊಂಡು ಸರಕಾರ ಸ್ಥಾಪಿಸಿ ಬಿಟ್ಟಿತು. ಇದೇ ಮೊದಲ ಬಾರಿ ಠಾಕ್ರೆ ಕುಟುಂಬ ನೇರವಾಗಿ ಅಧಿಕಾರಕ್ಕೆ ಬಂತು. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಇದೀಗ ಅದೇ ಸರಕಾರ ಪತನದ ಅಂಚಿನಲ್ಲಿದೆ. ಆದರೆ, ಶಿವಸೇನೆಯು ತನ್ನ ಬೆಳವಣಿಗೆಯ ಉದ್ದಕ್ಕೂ ಬಳಸಿದ ಕಾರ್ಯತಂತ್ರಗಳೂ ಬಹಳ ಕುತೂಹಲಕಾರಿಯಾಗಿವೆ. ಭಿವಂಡಿ ಸೇರಿದಂತೆ ಬಿಜೆಪಿಗಿಂತ ಮೊದಲೇ ಕೋಮುಗಲಭೆಗಳನ್ನು ವ್ಯವಸ್ಥಿತವಾಗಿ ತನ್ನ ಬೆಳವಣಿಗೆ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡದ್ದು ಶಿವಸೇನೆ. ಪಾಕಿಸ್ತಾನವನ್ನು ಶತ್ರುವೆಂದು ಬಿಂಬಿಸಿ ಲಾಭ ಪಡೆಯುವುದನ್ನು ಕಲಿಸಿಕೊಟ್ಟದ್ದು ಶಿವಸೇನೆ. ಹಲವಾರು ಮಂದಿರ ಮಸೀದಿ ವಿವಾದಗಳನ್ನು, ಬಿಜೆಪಿಯು ಬಾಬರಿ ಮಸೀದಿ ವಿವಾದವನ್ನು ಬಳಸಿಕೊಳ್ಳುವುದಕ್ಕೆ ಮೊದಲೇ ಬಳಸಿಕೊಂಡದ್ದು ಶಿವಸೇನೆ. ಬಾಬರಿ ಮಸೀದಿ ನಾಶದ ಬಳಿಕ ದೇಶದಲ್ಲೇ ಮೊದಲು ಮುಂಬೈಯಲ್ಲಿ ಭೀಕರ ಗಲಭೆ ಸೃಷ್ಟಿಸಿದ್ದು ಶಿವಸೇನೆ. ಇಂತಹ ಹಲವಾರು ವಿಷಯಗಳಿದ್ದು, ಅವುಗಳ ಬಗ್ಗೆಯೇ ಪ್ರತ್ಯೇಕವಾಗಿ ಹೇಳಬಹುದು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News