ಮುಂಬೈಗೆ ವಾಪಸ್ ಬನ್ನಿ, ನನ್ನ ಜೊತೆ ಮಾತನಾಡಿ: ಬಂಡಾಯ ಶಾಸಕರಿಗೆ ಪತ್ರ ಬರೆದು ಉದ್ಧವ್ ಮನವಿ

Update: 2022-06-28 14:20 GMT

ಮುಂಬೈ,ಜೂ.28: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಮಂಗಳವಾರ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡುಕೋರ ಶಿವಸೇನೆ ಶಾಸಕರಿಗೆ ಪತ್ರವೊಂದನ್ನು ಬರೆದು,ಮುಂಬೈಗೆ ಮರಳುವಂತೆ ಮತ್ತು ತನ್ನೊಂದಿಗೆ ಮಾತುಕತೆ ನಡೆಸುವಂತೆ ಆಗ್ರಹಿಸಿದ್ದಾರೆ.
‘ನಿಮ್ಮಲ್ಲಿ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಿಮ್ಮ ಹೃದಯದಲ್ಲಿ ಶಿವಸೇನೆಯಿದೆ. ನಾವು ಮಾತುಕತೆ ನಡೆಸಿ ಮಾರ್ಗವೊಂದನ್ನು ಕಂಡುಕೊಳ್ಳೋಣ. ನಾನು ನಿಮ್ಮಲ್ಲಿ ಮನವಿಯನ್ನು ಮಾಡಿಕೊಳ್ಳಲು ಬಯಸಿದ್ದೇನೆ. ಸಮಯವಿನ್ನೂ ಮೀರಿಲ್ಲ. ದಯವಿಟ್ಟು ಬನ್ನಿ,ನನ್ನೊಂದಿಗೆ ಕುಳಿತುಕೊಳ್ಳಿ,ಶಿವಸೈನಿಕರು ಮತ್ತು ಸಾರ್ವಜನಿಕರಲ್ಲಿಯ ಎಲ್ಲ ಶಂಕೆಗಳನ್ನು ನಿವಾರಿಸಿ ಮತ್ತು ನಾವು ಪರಿಹಾರವೊಂದನ್ನು ಕಂಡುಕೊಳ್ಳಬಹುದು. ನಾವೆಲ್ಲ ಒಟ್ಟಿಗೆ ಕುಳಿತುಕೊಂಡು ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ ’ ಎಂದು ಠಾಕ್ರೆ ಪತ್ರದಲ್ಲಿ ಬರೆದಿದ್ದಾರೆ.

ಯಾರದೇ ಹೇಳಿಕೆಗಳಿಗೆ ಬಲಿಯಾಗದಂತೆ ಬಂಡುಕೋರ ಶಾಸಕರನ್ನು ಕೇಳಿಕೊಂಡಿರುವ ಠಾಕ್ರೆ,‘ಶಿವಸೇನೆಯು ನಿಮಗೆ ನೀಡಿರುವ ಗೌರವವನ್ನು ನೀವು ಬೇರೆಲ್ಲಿಯೂ ಪಡೆಯಲು ಸಾಧ್ಯವಿಲ್ಲ. ನೀವು ಮುಖಾಮುಖಿಯಾದರೆ ನಾವು ಖಂಡಿತವಾಗಿಯೂ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಶಿವಸೇನೆಯ ಮುಖ್ಯಸ್ಥನಾಗಿ ಮತ್ತು ಕುಟುಂಬದ ಯಜಮಾನನಾಗಿ ಈಗಲೂ ನನಗೆ ನಿಮ್ಮ ಬಗ್ಗೆ ಚಿಂತೆಯಿದೆ’ ಎಂದು ಹೇಳಿದ್ದಾರೆ.

ಗುವಾಹಟಿಯಲ್ಲಿ ತನ್ನೊಂದಿಗೆ ಶಿವಸೇನೆಯ 40 ಸೇರಿದಂತೆ 50 ಶಾಸಕರಿದ್ದಾರೆ ಎಂದು ಠಾಕ್ರೆ ವಿರುದ್ಧ ಬಂಡಾಯದ ನೇತೃತ್ವ ವಹಿಸಿರುವ ಏಕನಾಥ ಶಿಂಧೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News