ಗುಜರಾತ್: ಬಿಜೆಪಿ ಸೇರುವಂತೆ ವಿದ್ಯಾರ್ಥಿನಿಯರಿಗೆ ನೋಟಿಸು ನೀಡಿದ ಕಾಲೇಜು ಪ್ರಾಂಶುಪಾಲೆ ರಾಜೀನಾಮೆ

Update: 2022-06-28 17:46 GMT

ಗಾಂಧಿನಗರ, ಜೂ. 28: ಬಿಜೆಪಿ ಸೇರುವಂತೆ ವಿದ್ಯಾರ್ಥಿನಿಯರಿಗೆ ಸೂಚಿಸಿ ನೋಟಿಸು ನೀಡಿದ್ದಾರೆ ಎಂಬ ಆರೋಪಕ್ಕೆ ಒಳಗಾದ ಗುಜರಾತ್‌ನ ಭಾವನಗರದ ಕಾಲೇಜಿನ ಪ್ರಾಂಶುಪಾಲರು ಸೋಮವಾರ ರಾಜೀನಾಮೆ ನೀಡಿದ್ದಾರೆ.

ಶ್ರೀಮತಿ ನರ್ಮದಾಬಾ ಚತುರ್ಭುಜ ಗಾಂಧಿ ಮಹಿಳಾ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲೆ ರಜನಿಬಾಲಾ ಗೋಹಿಲ್ ಅವರು ನೀಡಿದ್ದ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ವ್ಯಾಪಕ ವೈರಲ್ ಆಗಿತ್ತು. 

‘‘ಕಾಲೇಜಿನ ಪ್ರತಿ ವಿದ್ಯಾರ್ಥಿನಿಯರಿಗೆ ಈ ಮೂಲಕ ಹೀಗೆ ತಿಳಿಸಲಾಗುತ್ತಿದೆ: 
1. ಬಿಜೆಪಿಯ ಪೇಜ್ ಸಮಿತಿಯ ಸದಸ್ಯರಾಗಿ ನೋಂದಾಯಿಸಲು ಪ್ರತಿಯೋರ್ವ ವಿದ್ಯಾರ್ಥಿನಿ ತನ್ನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು. 
2. ಬಿಜೆಪಿಯ ಸದಸ್ಯತ್ವ ಅಭಿಯಾನದಲ್ಲಿ ಸೇರಲು ಕಾಲೇಜಿನ ಪ್ರತಿಯೋರ್ವ ವಿದ್ಯಾರ್ಥಿನಿ ಕೂಡ ಮೊಬೈಲ್ ಫೋನ್ ತರುವುದು ಅತ್ಯಗತ್ಯ’’ ಎಂದು ನೋಟಿಸಿನಲ್ಲಿ ಹೇಳಲಾಗಿತ್ತು. 

ಕಾಲೇಜು ನಡೆಸುತ್ತಿರುವ ದತ್ತಿ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ಧಿರೇಂದ್ರ ವೈಷ್ಣವ್, ತಾನು ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿದಾಗ ಗೋಹಿಲ್ ರಾಜೀನಾಮೆ ನೀಡಿದ ಬಗ್ಗೆ ತಿಳಿಯಿತು ಎಂದಿದ್ದಾರೆ. ‘‘ಈ ಘಟನೆ ನಡೆದ ಬಳಿಕ ತಾನು ಪ್ರಾಂಶುಪಾಲೆ ಹುದ್ದೆಯಿಂದ ಕೆಳಗಿಳಿಯುವುದು ನೈತಿಕ ಜವಾಬ್ದಾರಿ ಎಂದು ಗೋಹಿಲ್ ತನಗೆ ತಿಳಿಸಿದ್ದಾರೆ’’ ಎಂದು ವೈಷ್ಣವ್ ಹೇಳಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತು ಮಹಿಳೆಯೋರ್ವರು ಸಂಪರ್ಕಿಸಿದ ಬಳಿಕ ಗೋಹಿಲ್ ಅವರು ನೋಟಿಸು ಕಳುಹಿಸಿದ್ದಾರೆ ಎಂದು ವೈಷ್ಣವ್ ಅವರು ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News