ಝಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಂ ತೀರ್ಪು ತೀವ್ರ ನಿರಾಶದಾಯಕ: ಜೈರಾಮ್ ರಮೇಶ್

Update: 2022-06-28 17:56 GMT

ಹೊಸದಿಲ್ಲಿ, ಜೂ. 28: ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಝಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ತೀವ್ರ ನಿರಾಶದಾಯಕ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. 

ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ನೀಡಿದ ಕ್ಲೀನ್ ಚಿಟ್ ವರದಿಯನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ 2002 ಫೆಬ್ರವರಿ 28ರಂದು ಗುಂಪೊಂದು ದಾಂಧಲೆ ನಡೆಸಿ ಮನೆಗಳಿಗೆ ಬೆಂಚಿ ಹಚ್ಚಿದ ಘಟನೆಯಲ್ಲಿ ಮೃತಪಟ್ಟ 69 ಮಂದಿಯಲ್ಲಿ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದರು.  ಕಾಂಗ್ರೆಸ್ ಎಹ್ಸಾನ್ ಜಾಫ್ರಿ ಹಾಗೂ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನದ ಉಸ್ತುವಾರಿ) ಜೈರಾಮ್ ರಮೇಶ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಕೋಮು ಗಲಭೆಯ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರದ ಸಾಂವಿಧಾನಿಕ ಹಾಗೂ ನೈತಿಕ ಜವಾಬ್ದಾರಿ ಏನು ಎಂಬಂತಹ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಅವರು ಹೇಳಿದ್ದಾರೆ. 
ಒಂದು ರಾಜ್ಯವನ್ನು ಹಿಂಸಾಚಾರ ಹಾಗೂ ಗಲಭೆಯ ವೃತ್ತಕ್ಕೆ ತಳ್ಳಿದರು ಕೂಡ ಮುಖ್ಯಮಂತ್ರಿ, ಸಂಪುಟ ಹಾಗೂ ರಾಜ್ಯ ಸರಕಾರ ಎಂದಿಗೂ ಉತ್ತರದಾಯಿಯಾಗಿರುವುದಿಲ್ಲವೇ ? ಎಂದು ಅವರು ಪ್ರಶ್ನಿಸಿದ್ದಾರೆ. 
ಆ ಸಂದರ್ಭ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧರ್ಮವನ್ನು ಅಥವಾ ನಾಯಕನ ಪವಿತ್ರ ಕರ್ತವ್ಯವನ್ನು ಅನುಸರಿಸುವಂತೆ ನೆನಪಿಸಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News