ಹಣ ಅಕ್ರಮ ವರ್ಗಾವಣೆ ಪ್ರಕರಣ : ಹಾಜರಾಗಲು ಈ.ಡಿ.ಯಿಂದ ಕಾಲಾವಕಾಶ ಕೋರಿದ ಸಂಜಯ್ ರಾವುತ್

Update: 2022-06-28 18:03 GMT

ಮುಂಬೈ, ಜೂ. ೨೮: ಭೂ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಶಿವಸೇನೆ ಸಂಸದ ಸಂಜಯ್ ರಾವುತ್ ಮಂಗಳವಾರ ಕೋರಿದ್ದಾರೆ. 

ಪಾತ್ರ ವಸತಿ ಭೂ ಹಗರಣವೆಂದು ಹೇಳಲಾದ ಸುಮಾರು ೧,೦೩೪ ಕೋ. ರೂ. ವಂಚನೆ ಆರೋಪದ ಅಕ್ರಮ ಹಣ ವರ್ಗಾಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಸಂಜಯ್ ರಾವುತ್, ಅವರ ಪತ್ನಿ ಹಾಗೂ ನಿರ್ಮಾಣ ಸಂಸ್ಥೆ ಎಚ್‌ಡಿಐಎಲ್‌ನ ಪ್ರವರ್ತಕ ರಾಕೇಶ್ ವಾಧವಾನ್ ವಸತಿ ಯೋಜನೆಗೆ ವಂಚನೆಯಿಂದ ಹಣ ಸಂಗ್ರಹಿಸಿ ಬೇರೆ ಕಾರ್ಯಗಳಿಗೆ ಬಳಸಿದ್ದಾರೆ. ಯೋಜನೆ ಪೂರ್ಣಗೊಳಿಸುವ ಯಾವುದೇ ಉದ್ದೇಶ ಅವರಿಗೆ ಇರಲಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

ತನ್ನ ಕಕ್ಷಿದಾರನಿಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಕಾಲಾವಕಾಶ ನೀಡಿದೆ ಎಂದು ಸಂಜಯ್ ರಾವುತ್ ಅವರ ಪರ ನ್ಯಾಯವಾದಿ ವಿಕಾಸ್ ತಿಳಿಸಿದ್ದಾರೆ. ‘‘ಜಾರಿ ನಿರ್ದೇಶನಾಲಯಕ್ಕೆ ದಾಖಲೆಗಳನ್ನು ಸಲ್ಲಿಸಲು ನಾವು ೧೩ರಿಂದ ೧೪ ದಿನಗಳ ಕಾಲಾವಕಾಶ ಕೋರಿದ್ದೆವು’’ ಎಂದು ಅವರು ಹೇಳಿದ್ದರು. 
ಆದರೆ, ದಾಖಲೆಗಳನ್ನು ಸಲ್ಲಿಸಲು ರಾವುತ್ ಅವರಿಗೆ ಎಷ್ಟು ದಿನಗಳ ಕಾಲಾವಕಾಶ ದೊರೆತಿದೆ ಎಂದು ತತ್‌ಕ್ಷಣ ತಿಳಿದು ಬಂದಿಲ್ಲ. 

ಬಂಡಾಯ ಶಾಸಕರೊಂದಿಗೆ ಸಚಿವ ಏಕನಾಥ ಶಿಂದೆ ಅವರು ಕಳೆದ ವಾರ ಸೂರತ್‌ಗೆ ತೆರಳಿದ ಬಳಿಕ ಶಿವಸೇನೆಯಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ನಡುವೆ ಜಾರಿ ನಿರ್ದೇಶನಾಲಯ ರಾವುತ್‌ಗೆ ಸಮನ್ಸ್ ನೀಡಿದೆ. ಏಕನಾಥ ಶಿಂದೆ ನೇತೃತ್ವದ ಬಂಡಾಯ ಶಾಸಕರು ಈಗ ಗುವಾಹಟಿಯ ಹೊಟೇಲೊಂದರಲ್ಲಿ ಬೀಡು ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News