3 ಕೋಟಿ ರೂ. ವೆಚ್ಚದಲ್ಲಿ ಸಮಾಧಿ ಸ್ಥಳ ಅಭಿವೃದ್ಧಿ: ವೇದವ್ಯಾಸ ಕಾಮತ್

Update: 2022-06-29 13:45 GMT

ಮಂಗಳೂರು: ನಂದಿಗುಡ್ಡೆಯ ಕುದ್ಮುಲ್ ರಂಗರಾಯರ ಸಮಾಧಿ ಸ್ಥಳಕ್ಕೆ ಸಂಬಂಧಿಸಿದ ಜಮೀನಿನ ಗೊಂದಲ ನಿವಾರಿಸಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು  ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರ ಭವನದಲ್ಲಿ ಕುದ್ಮುಲ್ ರಂಗರಾವ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಂದು ತಿಂಗಳೊಳಗೆ ಇದಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ರಂಗರಾಯರು ನೀಡಿದ ಕೊಡುಗೆ ಮಂಗಳೂರು ವ್ಯಾಪ್ತಿ ಯಲ್ಲಿ ನಮ್ಮ ಕಣ್ಣ ಮುಂದಿದೆ. ಅವರು ಕಟ್ಟಿಸಿದ ಬಡಾವಣೆಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ಗಳು ನಗರದಲ್ಲಿದ್ದು, ಬಿಸಿಯೂಟ ಪರಿಕಲ್ಪನೆ, ವೃತ್ತಿಪರ ಕೋರ್ಸ ಇಂದಿಗೂ ಪ್ರಸ್ತುತವಾಗಿದೆ. ಅವರ ಜೀವನ ಬಿಂಬಿಸುವ ಚಿತ್ರಗಳನ್ನು ಪುರಭವನದ ಆವರಣದಲ್ಲಿ ಪ್ರದರ್ಶಿಸಲಾಗವುದು. ಸರ್ಕಾರ ವಿವಿಧ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಪಾಲಿಕೆ ವತಿಯಿಂದ ಪ.ಜಾ.ಮತ್ತು ಪ.ಪಂಗಡದವರ ಸರ್ವೇ ನಡೆಸಲು ಉದ್ದೇಶಿಸಲಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಮಂಗಳೂರು ಫಿಶರೀಸ್ ಕಾಲೇಜು ಡೀನ್ ಡಾ.ಶಿವಕುಮಾರ್ ಮಗದ, ಆಡಿದ ಮಾತಿನಂತೆ ಕೃತಿಯಲ್ಲಿ ತೋರಿಸಿದ ಮಹಾನ್ ಪುರುಷ ಕುದ್ಮುಲ್ ರಂಗ ರಾಯರು.  ರಾಯರ ಸಾಧನೆ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಅಗತ್ಯವಿದೆ ಎಂದರು. 

ಮುಡಾ ಅಧ್ಯಕ್ಷ  ರವಿಶಂಕರ್ ಮಿಜಾರ್, ಮಂಗಳೂರಿನ ಒಂದು ವೃತ್ತವನ್ನು ಕುದ್ಮುಲ್ ರಂಗರಾಯರ ಹೆಸರಿನಲ್ಲಿ ಅಭಿವೃದ್ಧಿ ಪಡಿಸಲು ಮುಡಾ ಯೋಜನೆ ರೂಪಿಸಿದೆ ಎಂದರು. ಪಾಲಿಕೆಯ ಅಂಗವಿಕಲ ನಿಧಿ ಮತ್ತು ಪ.ಜಾ ಮತ್ತು ಪಂಗಡದ ಕಲ್ಯಾಣ ಕಾರ್ಯಕ್ರಮದಡಿ ಸುಮಾರು 50 ಮಂದಿ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ, ಮನೆ ದುರಸ್ತಿ, ಮನೆ ನಿರ್ಮಾಣ ಸಹಾಯಧನ, ವಿದ್ಯಾ ಪ್ರೋತ್ಸಾಹಧನ, ಸ್ವ ಉದ್ಯೋಗ ಸಹಾಯಧನವಾಗಿ 26.88 ಲಕ್ಷ ರೂ. ಮೊತ್ತದ ವಿವಿಧ ಸವಲತ್ತು ವಿತರಿಸಲಾಯಿತು.  ಇದೇ ವೇಳೆ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಪದಾಧಿಕಾರಿಗಳು ಪುರಭವನದಲ್ಲಿ ಅಳವಡಿಸುವ ಉದ್ದೇಶದಿಂದ ಕುದ್ಮುಲ್ ರಂಗರಾಯರ ಭಾವಚಿತ್ರ ಮೇಯರ್‌ಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಉಪಮೇಯರ್ ಸುಮಂಗಳಾ ರಾವ್,  ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ.,  ದಿವಾಕರ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಲೀಲಾವತಿ ಪ್ರಕಾಶ್, ಸುಮಿತ್ರಾ, ಶಕೀಲಾ ಕಾವಾ, ಕಿರಣ್ ಕುಮಾರ್, ಭರತ್ ಕುಮಾರ್, ರೂಪಶ್ರೀ ಪೂಜಾರಿ, ಶೈಲೇಶ್ ಶೆಟ್ಟಿ, ಮನೋಜ್ ಕುಮಾರ್, ಮನೋಹರ್ ಕದ್ರಿ ಮೊದಲಾದವರಿದ್ದರು.

ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸ್ವಾಗತಿಸಿದರು. ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ವಂದಿಸಿದರು.

ಎಸ್‌ಸಿ/ಎಸ್‌ಟಿಯವರಿಗೆ ವಿಮೆ

ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ವಿಮಾ ಪಾಲಿಸಿಯೊಂದನ್ನು ಮಾಡಬೇಕು ಎಂದು ಉದ್ದೇಶಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ವಿನೂತನ ಕಾರ್ಯಕ್ರಮ ಜಾರಿಗೆ ತರಲು ಚಿಂತನೆ ನಡೆಸಿದ್ದು, ಕನಿಷ್ಠ 1 ಲಕ್ಷ ರೂ. ವಿಮಾ ಮೊತ್ತ ಪ್ರತಿಯೊಬ್ಬರಿಗೆ ಸಿಗಬೇಕು ಎನ್ನುವ ಉದ್ದೇಶವಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 64 ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು, ಮಂದಿನ ದಿನಗಳಲ್ಲಿ 190ಕ್ಕೂ ಅಧಿಕ ಮಂದಿಯನ್ನು ಕಾಯಂಗೊಳಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಕುದ್ಮುಲ್ ರಂಗರಾವ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಸಮಾಜದಲ್ಲಿ ಅಸ್ಪ ಶ್ಯತೆ ಗಂಭೀರವಾಗಿದ್ದ ಕಾಲಘಟ್ಟದಲ್ಲಿ ಕುದ್ಮುಲ್ ರಂಗರಾವ್ ಅವರು ಅದನ್ನು ಮೆಟ್ಟಿನಿಂತು ದಲಿತರ ಶ್ರೇಷೋಭಿವೃದ್ಧಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದರು. ಮೇಲ್ವರ್ಗ-ಕೆಳ ವರ್ಗಗಳಿದ್ದ ಸಂದರ್ಭದಲ್ಲಿ ಅದನ್ನು ಮೀರಿ ನಿಂತ ಸಂತ ಎಂದರು. 

‘ಕುದ್ಮುಲ್ ರಂಗರಾವ್ ಅವರು ನನ್ನ ಮಹಾಗುರುಗಳು’ ಎಂದು ಗಾಂಧೀಜಿ ಅವರೇ ಉಲ್ಲೇಖ ಮಾಡಿದ್ದಾರೆ. ಗಾಂಽಜಿ ಅವರಿಗೇ ಪ್ರೇರಣೆ, ಜ್ಞಾನ ಜ್ಯೋತಿ ನೀಡಿದ್ದು ರಂಗರಾವ್ ಅವರು. ಪರಿಶಿಷ್ಟ ಜಾತಿ ಸಮುದಾಯದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಅವಿಭಜಿತ ಜಿಲ್ಲೆಗಳಲ್ಲಿ ೭ ಶಿಕ್ಷಣ ಸಂಸ್ಥೆ, ವಸತಿ ನಿಲಯ, ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿದ ರಂಗರಾವ್ ಅವರು ಪ್ರಾತಃಸ್ಮರಣೀಯರು ಎಂದು ನಳಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News