ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್: ಭಾರತಕ್ಕೆ ಜಸ್‌ಪ್ರೀತ್ ಬುಮ್ರಾ ನಾಯಕತ್ವ

Update: 2022-06-29 17:29 GMT

ಹೊಸದಿಲ್ಲಿ, ಜೂ.29: ಸತತ ಎರಡನೇ ಬಾರಿ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಸ್ವೀಕರಿಸಿದ ಕಾರಣ ಖಾಯಂ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಜುಲೈ 1ಕ್ಕೆ ಮರು ನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಜಸ್‌ಪ್ರೀತ್ ಬುಮ್ರಾ 35 ವರ್ಷಗಳಲ್ಲಿ ಮೊದಲ ಬಾರಿ ಭಾರತೀಯ ಟೆಸ್ಟ್ ತಂಡದ ನಾಯಕತ್ವವಹಿಸಲಿರುವ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕ್ರಿಕೆಟ್ ದಿಗ್ಗಜ ಕಪಿಲ್‌ದೇವ್ ಈ ಮೊದಲು ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 1987ರಲ್ಲಿ ಅವರನ್ನ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆ ನಂತರ ಭಾರತದಲ್ಲಿ ಯಾವುದೇ ವೇಗದ ಬೌಲರ್ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿರಲಿಲ್ಲ.

ರೋಹಿತ್ ಅವರ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಮತ್ತೊಮ್ಮೆ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಈ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಉಪ ನಾಯಕನಾಗಿರುವ ಜಸ್‌ಪ್ರಿತ್ ಬುಮ್ರಾ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತವು 1932ರಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವನ್ನು ಆಡಿದ ಬಳಿಕ ಟೆಸ್ಟ್ ತಂಡದ ನಾಯಕತ್ವವಹಿಸಲಿರುವ ಭಾರತದ 36ನೇ ಕ್ರಿಕೆಟಿಗ ಬುಮ್ರಾ. ಗುಜರಾತ್‌ನ ವೇಗದ ಬೌಲರ್ 29 ಟೆಸ್ಟ್ ಪಂದ್ಯಗಳಲ್ಲಿ 123 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದಲ್ಲಿ ಸಾಂಂಪ್ರದಾಯಿಕವಾಗಿ ವೇಗದ ಬೌಲರ್‌ಗೆ ನಾಯಕತ್ವದ ಹೊಣೆ ನೀಡುವುದಿಲ್ಲ.

ಪಾಕಿಸ್ತಾನ ತಂಡದಲ್ಲಿ ಇಮ್ರಾನ್ ಖಾನ್, ವಸೀಂ ಅಕ್ರಂ ಹಾಗೂ ವಕಾರ್ ಯೂನಿಸ್‌ರಂತಹ ವೇಗದ ಲೆಜೆಂಡ್‌ಗಳು ನಾಯಕ ಸ್ಥಾನ ಪಡೆದಿದ್ದರು. ವೆಸ್ಟ್‌ಇಂಡೀಸ್ ಪರವಾಗಿ ಕೋರ್ಟ್ನಿ ವಾಲ್ಶ್ ಸಾಕಷ್ಟು ಸಮಯ ತಂಡವನ್ನು ಮುನ್ನಡೆಸಿದ್ದರು. ವಿಶ್ವದ ನಂ.1 ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಇದೀಗ ಆಸ್ಟ್ರೇಲಿಯದ ಟೆಸ್ಟ್ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತವು 2021ರಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿದೆ. ಐದನೇ ಪಂದ್ಯಕ್ಕಿಂತ ಮೊದಲು ಭಾರತ ತಂಡದಲ್ಲಿ ಕೊರೋನ ಕಾಣಿಸಿಕೊಂಡ ಕಾರಣ ಸರಣಿ ಮೊಟಕುಗೊಂಡಿತ್ತು. ಸರಣಿಯಲ್ಲಿ ಭಾರತವು 2-1 ಮುನ್ನಡೆಯಲಿದ್ದು, ಐದನೇ ಪಂದ್ಯವನ್ನು ಜುಲೈ 1ಕ್ಕೆ ಮರುನಿಗದಿಪಡಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News