ಉದ್ಧವ್‌ ಠಾಕ್ರೆಗೆ ಹಿನ್ನೆಡೆ: ವಿಶ್ವಾಸ ಮತಯಾಚನೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ

Update: 2022-06-29 15:51 GMT

ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು livelaw.com ವರದಿ ಮಾಡಿದೆ.  ಇದರಿಂದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಬಣಕ್ಕೆ ತೀವ್ರ ಹಿನ್ನೆಡೆಯಾಗಿದೆ. 

ಶಿವಸೇನೆಯ 16 ಮಂದಿ ಶಾಸಕರ ಅನರ್ಹತೆ ವಿಚಾರವು ಸುಪ್ರೀಂ  ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬಹುಮತ ಸಾಬೀತಿಗೆ ಕರೆದಿರುವುದನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.

ಜೂನ್ 30 ರಂದು ಮಹಾರಾಷ್ಟ್ರದಲ್ಲಿ ವಿಶ್ವಾಸಮತ ಪರೀಕ್ಷೆ ನಡೆಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಬುಧವಾರ ಪ್ರಾರಂಭವಾಗಿದ್ದು, ಶಿವಸೇನೆ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.

ವಿರೋಧ ಪಕ್ಷದ ನಾಯಕರು ರಾತ್ರಿ 10 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿದ್ದು, ಬಳಿಕ ನಾಳೆ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಆದೇಶಿಸಲಾಯಿತು. ಇದನ್ನು ಸೂಪರ್‌ಸಾನಿಕ್ ವೇಗದಲ್ಲಿ ಆದೇಶಿಸಲಾಗಿದೆ ಎಂದು ಸಿಂಘ್ವಿ ಹೇಳಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರು ದೇಶದಿಂದ ಹೊರಗಿದ್ದು, ಇಬ್ಬರು ಎನ್‌ಸಿಪಿ ಶಾಸಕರು ಕೊರೊನಾದಿಂದ ಬಳಲುತ್ತಿದ್ದಾರೆ. ರಾಜ್ಯಪಾಲರು ಈ ವಿಚಾರದಲ್ಲಿ ಕ್ಷಿಪ್ರವಾಗಿ ಕ್ರಮಕೈಗೊಂಡಿದ್ದಾರೆ. 24 ಗಂಟೆಗಳಲ್ಲಿ ಬಹುಮತ ಪರೀಕ್ಷೆ ಕೇಳಲಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ತಿಳಿದಿತ್ತು ಎಂದು ಸಿಂಘ್ವಿ ಹೇಳಿದ್ದಾರೆ.

16 ಶಾಸಕರ ಅನರ್ಹತೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ಮುಂದೂಡಿರುವ ನಡುವೆಯೇ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ನಡೆಸಲು  ರಾಜ್ಯಪಾಲರು ಆದೇಶಿಸಿರುವುದು ಶಿವಸೇನೆ ಹಾಗೂ ಮಿತ್ರಕೂಟದ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕರ ಅನರ್ಹತೆ ಪ್ರಕರಣ ಇತ್ಯರ್ಥವಾಗುವವರೆಗೆ ಮತ್ತು ನೋಟಿಸ್ ಕಳುಹಿಸಿರುವ ಇತರ ವಿಷಯಗಳು ಇತ್ಯರ್ಥವಾಗುವವರೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪರೀಕ್ಷೆ ಹೇಗೆ ನಡೆಸಲು ಸಾಧ್ಯ ಎಂದು ಶಿವಸೇನೆ ನಾಯಕರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News