ಕಾನೂನು ಕೈಗೆತ್ತಿಕೊಳ್ಳಲು ಯಾವುದೇ ಧರ್ಮ ಹೇಳಲ್ಲ: ಸಚಿವ ಡಾ. ಅಶ್ವತ್ಥ ನಾರಾಯಣ

Update: 2022-06-29 15:46 GMT

ಕುಂದಾಪುರ: ಉದಯಪುರ ಹತ್ಯೆಕೋರರು ಪ್ರಧಾನಿಗೆ ಬೆದರಿಕೆಯೊಡ್ಡಿರುವುದು ಹೀನ, ದೌರ್ಬಲ್ಯ, ಕೀಳು ಮನಸ್ಥಿತಿ, ಸಂಸ್ಕೃತಿಯನ್ನು ತೋರಿಸುತ್ತದೆ. ಪ್ರಧಾನಿ ಮೋದಿ ತಮ್ಮ ಆಡಳಿತಾವಧಿಯಲ್ಲಿ ಇಂತಹ ನೂರಾರು ಸಾವಿರಾರು ಸವಾಲು ಗಳನ್ನು ಎದುರಿಸಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ. ಅವರಿಂದ ಪ್ರಧಾನಿಯ ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವ ದಲ್ಲಿ ಎಲ್ಲ ರೀತಿಯಾದ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಲು, ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಈ ರೀತಿ ಕಾನೂನು ಕೈಗೆತ್ತಿಕೊಳ್ಳಲು ಯಾವುದೇ ಧರ್ಮದಲ್ಲಿ ಹೇಳುವುದಿಲ್ಲ. ಅಧರ್ಮಿಗಳು, ಮೂಢರು, ಮುಟ್ಟಾಳರ ಇಂತಹ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.

ಭಾರತೀಯರು ಶಾಂತಿಯುತವಾಗಿ ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ಬಾಳುತ್ತಿದ್ದೇವೆ. ಇಂತಹ ಕೌರ್ಯ ಮರುಕಳಿಸದಂತೆ ಸಂಬಂಧಪಟ್ಟ ರಾಜ್ಯ ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು ಆ ಮೂಲಕ ಪ್ರಜೆಗಳಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News