ಉಡುಪಿ ತಾಯಿ ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಸಿಎಂ ಬೊಮ್ಮಾಯಿ ಸೂಚನೆ

Update: 2022-06-29 16:14 GMT

ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಬಾಕಿ ಇರುವ ವೇತನವನ್ನು ಪಾವತಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಶಾಸಕ ಕೆ.ರಘುಪತಿ ಭಟ್ ನೀಡಿರುವ ಮನವಿಗೆ ಮುಖ್ಯಮಂತ್ರಿ, ವೇತನ ಬಾಕಿ ಪಾವತಿ ಮಾಡುವುದು ಎಂದು ಷರಾ ಬರೆದು ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ.

ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಈ ಹಿಂದೆ ಬಿ.ಆರ್. ಶೆಟ್ಟಿ ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಈ ಆಸ್ಪತ್ರೆಯ ಸಿಬ್ಬಂದಿಗಳಿಗೆ ವೇತನವನ್ನು ಸರಿಯಾಗಿ ಪಾವತಿಸದೆ ಬಾಕಿ ಇರಿಸಿದಲ್ಲದೆ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇದ್ದುದರಿಂದ ಪ್ರಸ್ತುತ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರಕಾರಕ್ಕೆ ಹಸ್ತಾಂತರಿಸಲಾಗಿದೆ.

ಈ ಹಿನ್ನಲೆಯಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿ ಆಸ್ಪತ್ರೆಗೆ ಅವಶ್ಯಕತೆ ಇರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನೇಮಿಸುವುದು ಹಾಗೂ ಸಿಬ್ಬಂದಿಗಳ ಬಾಕಿ ಇರುವ ವೇತನ ಪಾವತಿಯ ಬಗ್ಗೆ ವರದಿಯನ್ನು ತಯಾರಿಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News