ಇಬ್ಬರು ನನ್ನ ಅಂಗಡಿಯ ಮೇಲೆ ನಿಗಾಯಿಟ್ಟಿದ್ದಾರೆ: ಕೊಲೆಯಾಗುವ ಮುನ್ನ ಪೊಲೀಸರಿಗೆ ತಿಳಿಸಿದ್ದ ಕನೈಯಾಲಾಲ್

Update: 2022-06-29 17:46 GMT

ಉದಯಪುರ (ರಾಜಸ್ಥಾನ),ಜೂ.29: ಇಲ್ಲಿ ಮಂಗಳವಾರ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಟೇಲರ್ ಕನೈಯಾಲಾಲ್ ಅವರು,ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತನ್ನ ನೆರೆಕರೆಯವರಿಂದ ಬೆದರಿಕೆಗಳ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪ್ರವಾದಿ ಮುಹಮ್ಮದ್‌ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ನಾಯಕಿ ನೂಪುರ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಜೂ.11ರಂದು ಪೊಲೀಸರು ಕನೈಯಾಲಾಲ್‌ರನ್ನು ಬಂಧಿಸಿದ್ದು,ಮರುದಿನ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಜೂ.15ರಂದು ತನಗೆ ಬರುತ್ತಿದ್ದ ಜೀವ ಬೆದರಿಕೆಗಳ ಕುರಿತು ದೂರು ಸಲ್ಲಿಸಲು ಅವರು ಪೊಲೀಸ್ ಠಾಣೆಗೆ ತೆರಳಿದ್ದರು.

ಐದಾರು ದಿನಗಳ ಹಿಂದೆ ತನ್ನ ಮಗ ತನ್ನ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದಾಗ ಅಚಾತುರ್ಯದಿಂದ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್ ರವಾನಿಸಲ್ಪಟ್ಟಿತ್ತು ಮತ್ತು ಇದು ತನಗೆ ಗೊತ್ತಿರಲಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಆದರೆ ಎರಡು ದಿನಗಳ ಬಳಿಕ ಇಬ್ಬರು ವ್ಯಕ್ತಿಗಳು ಅಂಗಡಿಗೆ ಬಂದು ತನ್ನ ಮೊಬೈಲ್ ಫೋನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಮೂರು ದಿನಗಳಿಂದ ಇಬ್ಬರು ವ್ಯಕ್ತಿಗಳು ಅಂಗಡಿಯ ಬಳಿ ಸುಳಿದಾಡುತ್ತಿದ್ದು, ತಾನು ಅಂಗಡಿಯನ್ನು ತೆರೆಯುವುದನ್ನು ನಿರ್ಬಂಧಿಸುತ್ತಿದ್ದಾರೆ, ಅವರು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದ ಕನೈಯಾಲಾಲ್,ತನ್ನ ನೆರೆಕರೆಯವರನ್ನು ಹೆಸರಿಸಿದ್ದರು.

‘ದಯವಿಟ್ಟು ಈ ಜನರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಿ,ನನ್ನ ಅಂಗಡಿಯನ್ನು ತೆರೆಯಲು ನೆರವಾಗಿ ಮತ್ತು ನನ್ನನ್ನು ರಕ್ಷಿಸಿ’ ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು.

ಪೊಲೀಸರು ಕನೈಯಾಲಾಲ್ ಮತ್ತು ಅವರು ದೂರಿನಲ್ಲಿ ಹೆಸರಿಸಿದ್ದ ಆರೋಪಿಗಳು ಹಾಗೂ ಉಭಯ ಸಮುದಾಯಗಳ ನಾಯಕರನ್ನು ಕರೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದ್ದರು. ಎಲ್ಲವೂ ಬಗೆಹರಿದಿದೆ ಮತ್ತು ತನಗೆ ಪೊಲೀಸ್ ರಕ್ಷಣೆಯ ಅಗತ್ಯವಿಲ್ಲ ಎಂದು ಕನೈಯಾಲಾಲ್ ಲಿಖಿತ ಮೂಲಕ ತಿಳಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹವಾಸಿಂಗ್ ಘುಮರಿಯಾ ತಿಳಿಸಿದರು.

ಆದಾಗ್ಯೂ ತನ್ನ ಪತಿ ಭೀತಿಯಿಂದ ಹೊರಬಂದಿರಲಿಲ್ಲ ಎಂದು ಹೇಳಿದ ಕನೈಯಾಲಾಲ್‌ರ ಪತ್ನಿ ಯಶೋದಾ,ಅವರು ಒಂದು ವಾರ ಕಾಲ ಅಂಗಡಿಗೆ ಹೋಗಿರಲಿಲ್ಲ. ಮಂಗಳವಾರ ಮೊದಲ ಬಾರಿಗೆ ಅಂಗಡಿಗೆ ತೆರಳಿದ್ದರು ಎಂದು ತಿಳಿಸಿದರು.

ಕನೈಯಾಲಾಲ್ ಮೇಲೆ ದಾಳಿ ನಡೆಸಿದವರು ಅವರಿಗೆ ಬೆದರಿಕೆಯೊಡ್ಡಿದ್ದ ವ್ಯಕ್ತಿಗಳಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

 ಗೌಸ್ ಮುಹಮ್ಮದ್ ಮತ್ತು ರಿಯಾಝ್ ಅಖ್ತರಿ ಎನ್ನುವವರು ಕನೈಯಾಲಾಲ್‌ರನ್ನು ಅಂಗಡಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು ಮತ್ತು ಅದನ್ನು ವೀಡಿಯೊ ಚಿತ್ರೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News