ಭೀಮಾ ಕೋರೆಗಾಂವ್ ಪ್ರಕರಣ : ಐವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌ಐಎ ನ್ಯಾಯಾಲಯ

Update: 2022-06-29 17:41 GMT

ಹೊಸದಿಲ್ಲಿ, ಜೂ. 29: ಭೀಮಾ ಕೋರೆಗಾಂವ್ ಪ್ರಕರಣದ ಐವರು ಆರೋಪಿಗಳು ಡಿಫಾಲ್ಟ್ ಜಾಮೀನು (ನಿಗದಿತ ಅವಧಿಯ ಒಳಗೆ ಪೊಲೀಸರು ಅಥವಾ ತನಿಖಾ ಸಂಸ್ಥೆ ಪ್ರಕರಣದ ಕುರಿತು ದೂರು/ವರದಿ ದಾಖಲಿಸಲು ವಿಫಲವಾದಾಗ ಕೋರುವ ಜಾಮೀನು) ಕೋರಿ ಸಲ್ಲಿಸಿದ ಅರ್ಜಿಯನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ ನಾಯಾಲಯ ಮಂಗಳವಾರ ತಿರಸ್ಕರಿಸಿದೆ.

ಇದು 2018 ಜನವರಿ 1ರಂದು ಪುಣೆ ಸಮೀಪದ ಗ್ರಾಮದಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದ ಒಂದು ದಿನದ ಬಳಿಕ ನಡೆದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಈ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ 16 ಮಂದಿಯನ್ನು ಬಂಧಿಸಲಾಗಿತ್ತು. 
ಪ್ರಕರಣದ ಆರೋಪಿಗಳಾದ ಶೋಮ ಸೇನ್, ಸುರೇಂದ್ರ ಗಾಡ್ಲಿಂಗ್, ಸುಧೀರ್ ಧವಳೆ, ರೋನಾ ವಿಲ್ಸನ್, ಮಹೇಶ್ ರಾವುತ್ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ರಾಜೇಶ್ ಕಟಾರಿಯ ತಿರಸ್ಕರಿಸಿದ್ದಾರೆ. 

ನಿಗದಿಪಡಿಸಿದ ಸಮಯದ ಒಳಗೆ ತಮ್ಮ ವಿರುದ್ಧ ಆರೋಪ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸದೇ ಇರುವ ಆಧಾರದಲ್ಲಿ ಅವರು ಜಾಮೀನು ಕೋರಿದ್ದಾರೆ. ಪುಣೆಯ ಸೆಷನ್ಸ್ ನ್ಯಾಯಾಲಯ ಕೂಡ ಆರೋಪ ಪಟ್ಟಿ ಸಲ್ಲಿಸುವ ಕಾಲ ಮಿತಿಯನ್ನು ವಿಸ್ತರಿಸಿದೆ ಎಂದು ಅವರು ತಿಳಿಸಿದ್ದಾರೆ. 
ನರೇಂದ್ರ ಮೋದಿ ಸರಕಾರವನ್ನು ಉರುಳಿಸಲು ಈ ಬಂಧಿತರು ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ   ಎಂದು ಪುಣೆ ಪೊಲೀಸರು ಪ್ರತಿಪಾದಿಸಿದ್ದಾರೆ. 
ಇದೇ ಪ್ರಕರಣದ ಆರೋಪಿಯಾಗಿರುವ ಸುಧಾ ಭಾರದ್ವಾಜ್ ಅವರು ಸಲ್ಲಿಸಿದ್ದ ಡಿಫಾಲ್ಟ್ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಡಿಸೆಂಬರ್ 1ರಂದು ಪರಿಗಣಿಸಿತ್ತು. ಆದರೆ, ಇತರ 8 ಮಂದಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News