ಅಮೆರಿಕ: ಟ್ರಕ್‌ನಲ್ಲಿ ಮೃತ ವಲಸಿಗರ ಸಂಖ್ಯೆ 51ಕ್ಕೇರಿಕೆ ತನಿಖೆ ಆರಂಭ

Update: 2022-06-29 17:59 GMT

ಸ್ಯಾನ್ ಆ್ಯಂಟೊನಿಯೊ(ಅಮೆರಿಕ): ನಗರದ ದಕ್ಷಿಣ ಭಾಗದ ಹೊರವಲಯದಲ್ಲಿ ಟ್ರಕ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಲಸಿಗರ ಸಂಖ್ಯೆ 51ಕ್ಕೇರಿದ್ದು , ಈ ದುರಂತಕ್ಕೆ ಕ್ರಿಮಿನಲ್ ವೃತ್ತಿಪರ ಕಳ್ಳಸಾಗಣೆದಾರರು ಕಾರಣ ಎಂದು ಅಧ್ಯಕ್ಷ ಜೋ ಬೈಡನ್ ದೂಷಿಸಿದ್ದಾರೆ.

ನಗರದ ಹೊರವಲಯದ ರೈಲುಹಳಿಯ ಪಕ್ಕದ ನಿರ್ಜನ ರಸ್ತೆಯಲ್ಲಿ ಸೋಮವಾರ ಪತ್ತೆಯಾಗಿದ್ದ ಟ್ರಾಕ್ಟರ್-ಟ್ರೇಲರ್‌ನಲ್ಲಿ 39 ಪುರುಷರು ಹಾಗೂ 12 ಮಹಿಳೆಯರ ಮೃತದೇಹಗಳಿದ್ದವು ಎಂದು ಬೆಕ್ಸರ್ ಪ್ರಾಂತದ ಅಧಿಕಾರಿ ರೆಬೆಕಾ ಕ್ಲೆ-ಫ್ಲೋರ್ಸ್‌ ಹೇಳಿದ್ದಾರೆ. ಟ್ರಕ್‌ನಲ್ಲಿ 4 ಮಕ್ಕಳ ಸಹಿತ 11 ಮಂದಿ ಬದುಕುಳಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಮೂಲಗಳು ಹೇಳಿವೆ.

ಈ ಪ್ರಕರಣದ ಬಗ್ಗೆ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಘೋಷಿಸಿದೆ. ಇದೊಂದು ಕ್ರಿಮಿನಲ್ ಕೃತ್ಯವಾಗಿದೆ. ಸ್ಯಾನ್ ಆ್ಯಂಟೊನಿಯೊದಲ್ಲಿ ಸಂಭವಿಸಿರುವುದು ಅತ್ಯಂತ ಭಯಾನಕ ಮತ್ತು ಹೃದಯವಿದ್ರಾವಕ ಪ್ರಕರಣವಾಗಿದೆ. ವಲಸಿಗರನ್ನು ಬುಟ್ಟಿಗೆ ಹಾಕಿಕೊಂಡು ಮಾನವ ಕಳ್ಳಸಾಗಣೆ ಮಾಡುವ ಮಿಲಿಯಾಂತರ ಡಾಲರ್ ಕ್ರಿಮಿನಲ್ ಕಳ್ಳಸಾಗಣೆ ಉದ್ಯಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಈ ಘಟನೆ ಎತ್ತಿತೋರಿಸಿದೆ ಎಂದವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News