50 ಶಾಸಕರು ನಮ್ಮೊಂದಿಗಿದ್ದಾರೆ, ಯಾವುದೇ ಸದನದಲ್ಲಿ ಬಲಾಬಲ ಪರೀಕ್ಷೆಯಲ್ಲಿ ಗೆಲ್ಲಲಿದ್ದೇವೆ: ಬಂಡಾಯ ನಾಯಕ ಏಕನಾಥ ಶಿಂದೆ

Update: 2022-06-29 18:23 GMT

ಗುವಾಹಟಿ, ಜೂ. 29: ತನ್ನ ಪಕ್ಷ ಹಾಗೂ ಪಕ್ಷೇತರ 50 ಶಾಸಕರ ಬೆಂಬಲ ತನಗಿದೆ ಎಂದು ಬುಧವಾರ ಪ್ರತಿಪಾದಿಸಿರುವ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂದೆ, ನಾವು ಯಾವುದೇ ಸದನದ ಬಲಾಬಲ ಪರೀಕ್ಷೆಯಲ್ಲಿ ಜಯ ಗಳಿಸಲಿದ್ದೇವೆ ಎಂದಿದ್ದಾರೆ. 

ಗುವಾಹಟಿಯಲ್ಲಿರುವ ಕಾಮಾಖ್ಯ ದೇವಾಲಯಕ್ಕೆ ಇಂದು ಎರಡನೇ ಬಾರಿ ಭೇಟಿ ನೀಡಿರುವ ಶಿಂದೆ, ‘‘ನಮ್ಮೊಂದಿಗೆ 50 ಶಾಸಕರು ಇದ್ದಾರೆ. ಇದು ಮೂರನೇ ಎರಡಕ್ಕಿಂತ ಹೆಚ್ಚು. ಸದನದಲ್ಲಿ ಬಲಾಬಲ ಪರೀಕ್ಷೆಯ ಬಗ್ಗೆ ನಮಗೆ ಯಾವುದೇ ಆತಂಕ ಇಲ್ಲ. ನಾವು ಜಯ ಗಳಿಸಲಿದ್ದೇವೆ’’ ಎಂದರು. 
ವಿಧಾನ ಸಭೆಯಲ್ಲಿ ಗುರುವಾರ ಬಹುಮತ ಸಾಬೀತು ಪಡಿಸುವಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರಕಾರಕ್ಕೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸೂಚಿಸಿದ್ದಾರೆ. ಆದರೆ, ಈ ನಿರ್ದೇಶನವನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಹಾಗೂ ಬಹುಮತ ಮುಖ್ಯವಾಗಿರುವುದರಿಂದ ‘‘ನಮ್ಮನ್ನು ಯಾರೊಬ್ಬರೂ  ತಡೆಯಲು ಸಾಧ್ಯವಿಲ್ಲ’’ ಎಂದು ಶಿಂದೆ ಹೇಳಿದ್ದಾರೆ. 
‘‘ಯಾರೂ ಸಂವಿಧಾನ ಹಾಗೂ ರಾಷ್ಟ್ರದ ನಿಯಮ ಮೀರಿ ನಡೆಯುವ ಅಗತ್ಯತೆ ಇಲ್ಲ. ನಮ್ಮ ನಡೆ ಮಹಾರಾಷ್ಟ್ರದ ಪ್ರಗತಿಗೆ ಹಾಗೂ ಹಿಂದುತ್ವದ ಪ್ರಗತಿಗೆ. ಬಹುಮತ ನಮ್ಮೊಂದಿಗೆ ಇದೆ’’ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News