ನ್ಯಾಟೋ ಸೇರಲು ಫಿನ್ಲೆಂಡ್, ಸ್ವೀಡನ್‍ಗೆ ಆಹ್ವಾನ

Update: 2022-06-30 01:49 GMT

ಮ್ಯಾಡ್ರಿಡ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೋ) ತಮ್ಮ ಕೂಟವನ್ನು ಸೇರುವಂತೆ ಸ್ವೀಡನ್ ಮತ್ತು ಫಿನ್ಲೆಂಡ್‍ಗೆ ಆಹ್ವಾನ ನೀಡಿದೆ ಎಂದು timesofindia.com ವರದಿ ಮಾಡಿದೆ.

ಇದು ಯೂರೋಪ್ ಖಂಡದಲ್ಲಿ ಕಳೆದ ಒಂದು ದಶಕದಲ್ಲೇ ಅತ್ಯಂತ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಉಭಯ ದೇಶಗಳು ತಮ್ಮ ಸಾಂಪ್ರದಾಯಿಕ ತಟಸ್ಥ ನೀತಿಯನ್ನು ತೊರೆಯುವುದು ಅನಿವಾರ್ಯವಾಗಿದೆ.

ನ್ಯಾಟೋದ 30 ಮಿತ್ರದೇಶಗಳು ಮ್ಯಾಡ್ರಿಡ್‍ನಲ್ಲಿ ನಡೆದ ಶೃಂಗಸಭೆಯಲ್ಲಿ "ರಷ್ಯಾವನ್ನು ಮಿತ್ರದೇಶಗಳ ಭದ್ರತೆಗೆ ಅತ್ಯಂತ ಮಹತ್ವದ ಹಾಗೂ ನೇರ ಅಪಾಯ" ಎಂದು ಪರಿಗಣಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

"ಇಂದು ನಾವು ನ್ಯಾಟೋ ಸದಸ್ಯರಾಗುವಂತೆ ಫಿನ್ಲೆಂಡ್ ಮತ್ತು ಸ್ವೀಡನ್‍ಗೆ ಆಹ್ವಾನ ನೀಡಿದ್ದೇವೆ" ಎಂದು ಶೃಂಗಸಭೆಯ ಬಳಿಕ ಬಿಡುಗಡೆ ಮಾಡಲಾದ ನಿರ್ಣಯಗಳ ಘೋಷಣೆಯಲ್ಲಿ ಹೇಳಲಾಗಿದೆ. ಉಭಯ ದೇಶಗಳು ನ್ಯಾಟೋ ಸೇರದಂತೆ ಟರ್ಕಿ ಚಲಾಯಿಸಿದ್ದ ವಿಟೊವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇದಕ್ಕೂ ಮುನ್ನ ಫಿನ್ಲೆಂಡ್ ಮತ್ತು ಸ್ವೀಡನ್ ನ್ಯಾಟೋ ಕೂಟ ಸೇರಲು ವಿರೋಧ ವ್ಯಕ್ತಪಡಿಸಿದ್ದ ಟರ್ಕಿ ಅಧ್ಯಕ್ಷ, 10 ಅಂಶಗಳ ಒಪ್ಪಂದದ ಬಳಿಕ ತಮ್ಮ ನಿಲುವು ಸಡಿಲಿಸಿದ್ದರು. ಉಭಯ ದೇಶಗಳು ನಿಷೇಧಿತ ಖುರ್ದಿಷ್ ಉಗ್ರರ ಟರ್ಕಿ ಹೋರಾಟಕ್ಕೆ ನೆರವು ನೀಡಬೇಕಾಗುತ್ತದೆ ಮತ್ತು ಶಂಕಿತರನ್ನು ಗಡೀಪಾರು ಮಾಡಬೇಕಾಗುತ್ತದೆ. ಟರ್ಕಿ 33 ಮಂದಿ ಶಂಕಿತ ಕುರ್ದಿಶ್ ಉಗ್ರರನ್ನು ಫಿನ್ಲೆಂಡ್‍ನಿಂದ ಮತ್ತು 21 ಮಂದಿಯನ್ನು ಸ್ವೀಡನ್‍ನಿಂದ ಗಡೀಪಾರು ಮಾಡುವಂತೆ ಕೋರುವುದಾಗಿ ಟರ್ಕಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News