ಗುರುವಾರ ಮುಂಬೈಗೆ ಆಗಮಿಸಬೇಡಿ: ಶಿವಸೇನೆ ಬಂಡಾಯ ಶಾಸಕರಿಗೆ ಬಿಜೆಪಿ ಮನವಿ

Update: 2022-06-30 02:13 GMT
(ಫೋಟೊ - PTI)

ಮುಂಬೈ: ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರದ ದಿನ ಆಗಮಿಸುವಂತೆ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಮನವಿ ಮಾಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಬುಧವಾರ ಸಂಜೆ ಖಾಸಗಿ ವಿಶೇಷ ವಿಮಾನದಲ್ಲಿ ಶಿಂಧೆ ಬಣ ಎಂಟು ದಿನಗಳ ಅಸ್ಸಾಂ ವಾಸ್ತವ್ಯದ ಬಳಿಕ ಗೋವಾಗೆ ಆಗಮಿಸಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿಗದಿಯಾಗಿರುವ ಸದನ ಪರೀಕ್ಷೆಗೆ ಹಾಜರಾಗುವ ಸಲುವಾಗಿ ಗುರುವಾರ ಆಗಮಿಸುವ ನಿರೀಕ್ಷೆ ಇದೆ.

ಆದರೆ ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ಹಿನ್ನೆಲೆಯಲ್ಲಿ ವಿಶ್ವಾಸಮತ ಅನಗತ್ಯವಾಗಿದ್ದು, ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ವೇದಿಕೆ ಸಜ್ಜಾಗಿದೆ.

"ಮುಂಬೈಗೆ ಆಗಮಿಸಲು ಉದ್ದೇಶಿಸಿರುವ ಶಿವಸೇನೆ ಬಂಡಾಯ ಶಾಸಕರು ಗುರುವಾರ ಆಗಮಿಸದಂತೆ ನಾನು ಕೋರುತ್ತಿದ್ದೇನೆ. ಅವರು ಪ್ರಮಾಣವಚನ ಸ್ವೀಕಾರದಂದು ಹಾಜರಾಗಬೇಕು" ಎಂದು ಪಾಟೀಲ್ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‍ಐ ವರದಿ ಮಾಡಿದೆ.

ಬಿಜೆಪಿಯ ಮುಂದಿನ ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ, "ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ಮುಂದಿನ ಹೆಜ್ಜೆಗಳ ಬಗ್ಗೆ ನಿರ್ಧರಿಸಲಿದ್ದಾರೆ" ಎಂದು ಉತ್ತರಿಸಿದರು. ಪಕ್ಷದ ನಿಲುವನ್ನು ನಾಳೆ ಪ್ರಕಟಿಸುವುದಾಗಿ ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುರುವಾರ ನಡೆಯಬೇಕಿದ್ದ ಸದನ ಪರೀಕ್ಷೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಠಾಕ್ರೆ ಬುಧವಾರ ರಾತ್ರಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಠಾಕ್ರೆ ಬಂಡಾಯ ಶಾಸಕರಿಗೆ ಭಾವನಾತ್ಮಕ ಮನವಿ ಮಾಡಿಕೊಂಡಿದ್ದು, ಮಿತ್ರಪಕ್ಷಗಳಾದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News