ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ಸಂಭ್ರಮಿಸುವ ವಿಚಾರ ಅಲ್ಲ: ಏಕನಾಥ್ ಶಿಂಧೆ

Update: 2022-06-30 03:20 GMT

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ವಿಚಾರ ನಾವು ಸಂಭ್ರಮಿಸುವ ಬೆಳವಣಿಗೆ ಅಲ್ಲ ಎಂದು ಭಿನ್ನಮತೀಯ ಮುಖಂಡ ಏಕನಾಥ್ ಶಿಂಧೆ ಬಣ ಪ್ರತಿಕ್ರಿಯಿಸಿರುವುದಾಗಿ ndtv.com ವರದಿ ಮಾಡಿದೆ.

ಪಕ್ಷದೊಳಗಿನ ಆಂತರಿಕ ಸಂಘರ್ಷ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿಯ ಪರಿಣಾಮ ಎಂದು ಅವರು ಹೇಳಿದರು. ಸಂಜಯ್ ರಾವುತ್ ಅವರಿಗೆ ಪಕ್ಷದಲ್ಲಿ ಹೆಚ್ಚುತ್ತಿರುವ ಪ್ರಾಧಾನ್ಯತೆ ಅಂಶವನ್ನೂ ಬಣ ಒತ್ತಿ ಹೇಳಿದೆ.

"ನಾವು ಸೂಚಿಸಿದ ಸಮಸ್ಯೆಗಳನ್ನು ಉದ್ಧವ್ ಠಾಕ್ರೆ ಪರಿಗಣಿಸಿಲ್ಲ" ಎಂದು ಬಂಡಾಯ ಬಣದ ವಕ್ತಾರ ದೀಪಕ್ ಕೇಸರ್‍ಕರ್ ಸ್ಪಷ್ಟಪಡಿಸಿದರು. "ಕಾಂಗ್ರೆಸ್ ಮತ್ತು ಎನ್‍ಸಿಪಿ ಜತೆ ಹೋರಾಡುವ ವೇಳೆ ನಮ್ಮ ನಾಯಕರ ವಿರುದ್ಧ ಮುನಿಸಿಕೊಂಡಿದ್ದಕ್ಕೆ ಬೇಸರವಿದೆ" ಎಂದರು.

ಎನ್‍ಸಿಪಿ ಹಾಗೂ ಸಂಜಯ್ ರಾವುತ್ ಅವರ ಪ್ರತಿದಿನದ ಕೆಲಸ ಕೇಂದ್ರ ಸರ್ಕಾರವನ್ನು ಟೀಕಿಸುವುದು ಮತ್ತು ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಬಂಧ ಹದಗೆಡಿಸುವುದಾಗಿತ್ತು ಎಂದು ಎನ್‍ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಂಡಾಯಕ್ಕೆ ಕಾರಣ ವಿವರಿಸಿದರು.

ಸೈದ್ಧಾಂತಿಕವಾಗಿ ಭಿನ್ನವಾಗಿರುವ ಎನ್‍ಸಿಪಿ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಅಸಹಜ ಎಂದು ಕರೆದ ಅವರು, ಬಿಜೆಪಿ ಜತೆ ಕೈಜೋಡಿಸುವ ಒಲವು ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಠಾಕ್ರೆ ಬಣದಲ್ಲಿ ಕೇವಲ 15 ಶಾಸಕರು ಉಳಿದುಕೊಂಡ ಹಿನ್ನೆಲೆಯಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆಗೆ ಸುಪ್ರೀಂಕೋರ್ಟ್ ಸೂಚಿಸಿದ ಬಳಿಕ ಠಾಕ್ರೆ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್ ಹಾಗೂ ಎನ್‍ಸಿಪಿ ಬಗ್ಗೆ ಹಲವು ಸಂಸದರಿಗೂ ಅಸಮಾಧಾನ ಇದೆ ಎಂದು ಕೇಸರ್‍ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News