ಈ ‘ಡಾಕ್ಟರ್’ಕುಟುಂಬದ ಪ್ರತಿಯೊಬ್ಬರೂ 1920ರಿಂದ ವೈದ್ಯಕೀಯ ವೃತ್ತಿ ಅನುಸರಿಸುತ್ತಿದ್ದಾರೆ!

Update: 2022-06-30 16:15 GMT
Photo Credit: Zee News Network 

ಹೊಸದಿಲ್ಲಿ: ಪ್ರತಿ ವರ್ಷ ಜು.1ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಕೋವಿಡ್ ಕಾಲದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿ ಹಗಲಿರುಳು ರೋಗಿಗಳ ಸೇವೆ ಮಾಡಿದ್ದು,ಇದು ಈ ವೃತ್ತಿಗೆ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವ ಅಗತ್ಯವಿದೆ ಎನ್ನುವುದನ್ನು ತೋರಿಸಿದೆ.

ಈ ವರ್ಷದ ವೈದ್ಯರ ದಿನದಂದು 1920ರಿಂದ ಈ ನೂರು ವರ್ಷಗಳಲ್ಲಿ ಪ್ರತಿಯೊಬ್ಬ ಸದಸ್ಯರು ವೈದ್ಯವೃತ್ತಿಯನ್ನು ನಡೆಸಿರುವ ದಿಲ್ಲಿಯ ಕುಟುಂಬವನ್ನು ಸಂಭ್ರಮಿಸೋಣ. ಈ ‘ಡಾಕ್ಟರ್’ ಕುಟುಂಬದಲ್ಲಿ ಈಗ 150 ವೈದ್ಯರಿದ್ದಾರೆ. ಅವರು ಈ ವೃತ್ತಿಯನ್ನು ಒಂದು ಧ್ಯೇಯವನ್ನಾಗಿ ಮತ್ತು ಇದೇ ವೇಳೆ ಅದನ್ನೊಂದು ಸವಾಲನ್ನಾಗಿ ಇಟ್ಟುಕೊಂಡಿದ್ದಾರೆ ಎಂದು wionews.com ವರದಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಟುಂಬದ ಸೊಸೆ ಡಾ.ಗ್ಲಾಸಿ ಸಬರವಾಲ್ ಅವರು 1920ರ, ದಿ.ಲಾಲಾ ಜೀವನಮಲ್ ಅವರ ಕಾಲದ ಫೋಟೊವೊಂದನ್ನು ಬೆಟ್ಟು ಮಾಡಿದರು. ಕುಟುಂಬದ ಪೂರ್ವಜ ಜೀವನಮಲ್ ಅವರು ಪಾಕಿಸ್ತಾನದ ಜಲಾಲ್ಪುರ ನಗರದಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಈ ದೇಶದ ಭವಿಷ್ಯವು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂಬ ಮಹಾತ್ಮಾ ಗಾಂಧಿಯವರ ಮಾತಿನಿಂದ ಪ್ರೇರಿತರಾಗಿದ್ದ ಜೀವನಮಲ್ ತನ್ನ ಎಲ್ಲ ನಾಲ್ಕೂ ಪುತ್ರರನ್ನು ವೈದ್ಯರನ್ನಾಗಿಸಲು ನಿರ್ಧರಿಸಿದ್ದರು. ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ ಈ ಕುಟುಂಬವು ದಿಲ್ಲಿಗೆ ಸ್ಥಳಾಂತರಗೊಂಡಿತ್ತು ಮತ್ತು ಅಲ್ಲಿಂದ ಕುಟುಂಬದಲ್ಲಿಯ ಪ್ರತಿಯೊಬ್ಬರನ್ನೂ ವೈದ್ಯರನ್ನಾಗಿ ಮಾಡುವ ಪರಂಪರೆ ಆರಂಭಗೊಂಡಿತ್ತು.

‘ಕಳೆದ 102 ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇದು ಸುಲಭದ ಕೆಲಸವಲ್ಲ. ಏಕೆಂದರೆ ಕುಟುಂಬದ ಕುಡಿಯೋರ್ವ ಮ್ಯಾನೇಜ್ಮೆಂಟ್ ಪದವಿಗೆ ಓದಲಾರಂಭಿಸಿದ್ದ,ಆದರೆ ಅಜ್ಜಿಯ ಭಾವನಾತ್ಮಕ ಮನವಿ ಮತ್ತು ಕುಟುಂಬದ ವಾತಾವರಣವು ಆತ ಮ್ಯಾನೇಜ್ಮೆಂಟ್ ಶಿಕ್ಷಣವನ್ನು ತೊರೆದು ವೈದ್ಯಕೀಯ ವೃತ್ತಿಯನ್ನು ಮುಂದುವರಿಸುವುದನ್ನು ಅನಿವಾರ್ಯವಾಗಿಸಿತ್ತು. ಇಂದು ಆತ ಯಶಸ್ವಿ ಸರ್ಜನ್ ಆಗಿದ್ದಾನೆ’ಎಂದು ಡಾ.ಅಂಕುಶ ಸಬರವಾಲ್ ಹೇಳಿದರು.

ದಿಲ್ಲಿಯ ಜೀವನಮಲ್ ಆಸ್ಪತ್ರೆಯು ಹಣವಿಲ್ಲವೆಂಬ ಕಾರಣಕ್ಕೆ ಯಾವುದೇ ರೋಗಿಯನ್ನು ವಾಪಸ್ ಕಳುಹಿಸದಿರುವ ಸಂಪ್ರದಾಯವನ್ನು ಕಾಯ್ದುಕೊಂಡು ಬಂದಿದೆ. ವೈದ್ಯರಾಗಿದ್ದ ಈ ಕುಟುಂಬದ ಇಬ್ಬರು ಸದಸ್ಯರು ಕಳೆದ ವರ್ಷ ಕೊರೋನವೈರಸ್ ಗೆ ಬಲಿಯಾಗಿದ್ದರು.

ಕಠಿಣ ಪರಿಶ್ರಮ ಮತ್ತು ತ್ಯಾಗವನ್ನು ಬೇಡುವ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಳ್ಳುವಂತೆ ಮುಂದಿನ ಪೀಳಿಗೆಯ ಮನವೊಲಿಸುವುದು ತುಂಬ ಕಷ್ಟ ಎಂದು ಡಾ.ವಿನಯ್ ಹೇಳಿದರು.

ಕುಟುಂಬದ ಸೊಸೆಯಂದಿರೂ ವೈದ್ಯರಾಗುತ್ತಾರೆ ಮತ್ತು ಕುಟುಂಬದ ಆಸ್ಪತ್ರೆಗೆ ಸೇರ್ಪಡೆಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News