ಪ.ಜಾ., ಪ.ಪಂ.ಗಳ ವಿರುದ್ಧದ ಅಪರಾಧಗಳಲ್ಲಿ ಪ್ರಕರಣ ದಾಖಲಿಸಲು ವಿಳಂಬ ಬೇಡ: ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚನೆ

Update: 2022-06-30 16:45 GMT

ಹೊಸದಿಲ್ಲಿ, ಜೂ. 30: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ  ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಲ್ಲಿ ಯಾವುದೇ ವಿಳಂಬ ಮಾಡಬಾರದು ಹಾಗೂ ಎರಡು ತಿಂಗಳು ಮೀರಿ ತನಿಖೆ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ನಿಕಟ ನಿಗಾ ಇರಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿರುವ ಗೃಹ ಸಚಿವಾಲಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಅಧಿಕೃತ ಸಾಕ್ಷಿಗಳು ಸೇರಿದಂತೆ ಎಲ್ಲ ಪಾಸಿಕ್ಯೂಷನ್ ಸಾಕ್ಷಿಗಳಿಗೆ  ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್‌ಪಿ) ಸಮಯೋಚಿತ ಹಾಜರಾತಿ ಹಾಗೂ ರಕ್ಷಣೆಯ ಖಾತರಿ ನೀಡಬೇಕು ಎಂದಿದೆ. 

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ಯಾವುದೇ ವಿಳಂಬ ಮಾಡಬಾರದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವುದರಿಂದ ಆರಂಭವಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಪ್ರಕರಣ ವಿಲೇವಾರಿ ಆಗುವ ವರೆಗೆ ಸೂಕ್ತ ಹಂತದಲ್ಲಿ ಸರಿಯಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅದು ಸೂಚಿಸಿದೆ.

ತನಿಖೆಯಲ್ಲಿ ವಿಳಂಬ (ಎಫ್‌ಐಆರ್ ದಾಖಲಿಸಿದ ಬಳಿಕ 60 ದಿನಗಳಿಗಿಂತ ಅಧಿಕ ದಿನಗಳು) ವನ್ನು ಪ್ರತಿ ಮೂರು ತಿಂಗಳು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನಿಗಾ ವಹಿಸಬೇಕು. ಅಗತ್ಯ ಇದ್ದರೆ, ತನಿಖಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿಶೇಷ ಡಿಎಸ್‌ಪಿ ಅವರನ್ನು ನಿಯೋಜಿಸಬೇಕು ಎಂದು ಗೃಹ ಸಚಿವಾಲಯ ತಿಳಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಸೇರಿದಂತೆ ವಿವಿಧ ಮೂಲಗಳಿಂದ ಸ್ವೀಕರಿಸಲಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ಪರಕರಣಗಳ ವರದಿಯನ್ನು ಸರಿಯಾಗಿ ಅನುಸರಿಸುವ ಖಾತರಿಯನ್ನು ರಾಜ್ಯ ಸರಕಾರದ ಸಂಬಂಧಿತ ಪ್ರಾಧಿಕಾರಗಳು ನೀಡಬೇಕು ಎಂದು ಅದು ತಿಳಿಸಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸದಸ್ಯರ ಜೀವ ಹಾಗೂ ಸೊತ್ತನ್ನು ರಕ್ಷಿಸಲು ನಿಯಂತ್ರಣ ಕ್ರಮ ತೆಗೆದುಕೊಳ್ಳಲು  ದೌರ್ಜನ್ಯ ನಡೆಯುತ್ತಿರುವ ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಪ್ರದೇಶಗಳಿಗೆ ಪೊಲೀಸರನ್ನು ನಿಯೋಜಿಸಬೇಕು ಸಚಿವಾಲಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News