ರಾಜಕಾರಣಿಗಳು ವಿಭಜನೆಯ ವಿಷಬೀಜ ಬಿತ್ತಬಾರದು

Update: 2022-06-30 18:44 GMT

ಕರ್ನಾಟಕದ ಸಚಿವರೊಬ್ಬರು ಆಗಾಗ ರಾಜ್ಯವನ್ನು ವಿಭಜನೆ ಮಾಡುವ ಬಗ್ಗೆ ಸಾರ್ವಜನಿಕ ಹೇಳಿಕೆ ಕೊಡುತ್ತ ಬಂದಿದ್ದಾರೆ. ಇದು ಅವರ ವ್ಯಾಪ್ತಿ ಮೀರಿದ್ದು. ಇಂತಹ ಹೇಳಿಕೆ ನೀಡದಂತೆ ಮುಖ್ಯಮಂತ್ರಿ ಮತ್ತು ಆಡಳಿತ ಪಕ್ಷ ತಾಕೀತು ಮಾಡಬೇಕು. ಈ ವಿಷಯದಲ್ಲಿ ಸಚಿವರು ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬರುವುದಿಲ್ಲ. ಹಾಗೆ ಅವರು ಹೇಳಿಕೆ ನೀಡಬೇಕು ಎಂದರೆ ಸಚಿವ ಪದವಿ ತ್ಯಜಿಸಬೇಕು. ಸಚಿವ ಪದವಿ ಸ್ವೀಕರಿಸುವಾಗ ರಾಜ್ಯದ ಘನತೆ ಮತ್ತು ಸಮಗ್ರತೆಗೆ ಕುಂದು ತರುವ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿರುತ್ತಾರೆ. ಅದರಂತೆ ನಡೆದುಕೊಳ್ಳಬೇಕು. ಅವರು ಕರ್ನಾಟಕ ಸರಕಾರದ ಸಚಿವರು. ಅವರಿಗೆ ಹೋರಾಟವೇ ಬೇಕಿದ್ದಲ್ಲಿ ತಮ್ಮ ಸಚಿವ ಪದವಿ ತ್ಯಜಿಸಬೇಕು. ಅಧಿಕಾರದಲ್ಲಿದ್ದು ರಾಜ್ಯದ ವಿರುದ್ಧ ಹೇಳಿಕೆ ನೀಡಬಾರದು ಎಂದು ಸಾಮಾನ್ಯ ತಿಳುವಳಿಕೆಯನ್ನು ಅವರು ಮರೆತಿರಬಹುದು. ಭಾಷಾವಾರು ಪ್ರಾಂತ ರಚನೆಗೆ ನೂರಾರು ಜನ ಹೋರಾಟ ನಡೆಸಿದ್ದಾರೆ. ಉತ್ತರ ಕರ್ನಾಟಕದವರೇ ಹೆಚ್ಚು ಕರ್ನಾಟಕದ ಏಕೀಕರಣಕ್ಕೆ ಹೋರಾಟ ನಡೆಸಿದವರು. ಅವರ ತ್ಯಾಗ, ಬಲಿದಾನವನ್ನು ಜನ ಮರೆತಿಲ್ಲ. ಈಗಲೂ ಜನ ಅವರೆಲ್ಲರನ್ನೂ ಪ್ರಾತಃಸ್ಮರಣೀಯರು ಎಂದು ತಿಳಿದಿದ್ದಾರೆ. ಜನರ ಮನಸ್ಸಿನಲ್ಲಿನ ಭಾವನೆಗಳಿಗೆ ಗೌರವ ಕೊಡುವುದು ಜನಪ್ರತಿನಿಧಿಗಳ ಕರ್ತವ್ಯ. ಭಾಷಾವಾರು ಪ್ರಾಂತ ರಚನೆಯಾದಾಗ ಹಳೆ ಮೈಸೂರು-ಉತ್ತರ ಕರ್ನಾಟಕ-ಕರಾವಳಿ - ಕಲ್ಯಾಣ ಕರ್ನಾಟಕ ಎಂಬ ಭೇದ ಇದ್ದದ್ದು ನಿಜ.

ಆದರೆ ಈಗ ಆ ಭಾವನೆ ಯಾರಲ್ಲೂ ಇಲ್ಲ. ಕರ್ನಾಟಕದ ಏಕೀಕರಣ ಎಷ್ಟೋ ದಶಕಗಳ ಹಿಂದೆ ಆಗಿಹೋಗಿದೆ. ಹಳೆಯ ಭಾವನೆಗಳನ್ನು ಈಗ ಕೆರಳಿಸುವುದು ಸರಿಯಲ್ಲ. ಜನರ ಮನಸ್ಸುಗಳು ಒಂದುಗೂಡಿದ ಮೇಲೆ ಈಗ ಒಡಕಿನ ಮಾತು ಕೇಳಿ ಬರಬಾರದು. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಿದ್ದೇ ಅಖಂಡ ಕರ್ನಾಟಕ ಒಂದಾಗಿದೆ ಎಂಬುದರ ಪ್ರತೀಕ. ಈಗಲೂ ಅಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದು ನಮ್ಮ ಏಕೀಕರಣದ ಸಾಧನೆಯ ಪ್ರತಿಬಿಂಬ. ಹೈಕೋರ್ಟ್ ಸೇರಿದಂತೆ ಎಲ್ಲ ಆಡಳಿತ ಉತ್ತರ ಕರ್ನಾಟಕದಲ್ಲೂ ಬೇರೂರಬೇಕು. ಅಲ್ಲಿಯ ಜನ ತಮ್ಮ ಕೆಲಸಗಳಿಗೆ ಬೆಂಗಳೂರಿಗೆ ಬರಬಾರದು ಎಂಬ ಉದ್ದೇಶದಿಂದಲೇ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ. ಅಧಿಕಾರ ವಿಕೇಂದ್ರೀಕರಣದಿಂದ ಪ್ರಾದೇಶಿಕ ಅಸಮಾನತೆ ದೂರವಾಗಬೇಕು ಎಂದೇ ಡಾ. ನಂಜುಂಡಪ್ಪಸಮಿತಿ ವರದಿಯನ್ನು ಸರಕಾರ ಜಾರಿಗೆ ತಂದಿದೆ. ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಉತ್ತಮಗೊಂಡಿದೆ.

ಉತ್ತರ ಕರ್ನಾಟಕದ ಯುವ ಜನಾಂಗ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಐಟಿ-ಬಿಟಿ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರೂ ಇವರನ್ನು ಉತ್ತರ ಕರ್ನಾಟಕದವರು ಎಂದು ದೂರ ಇಡುತ್ತಿಲ್ಲ. ಜನರಲ್ಲಿ ಇಲ್ಲದ ಭಾವನೆಗಳನ್ನು ಸಚಿವರು ಬಿತ್ತಲು ಯತ್ನಿಸಬಾರದು. ಇದು ಜನ ವಿರೋಧಿ ಕೃತ್ಯಗಳು. ಒಂದು ರಾಜ್ಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಕಟ್ಟುವುದು ಬಹಳ ಕಷ್ಟ. ಹಲವು ರಂಗಗಳಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಐಟಿ-ಬಿಟಿಯಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಜನಪ್ರಿಯಗೊಂಡಿದೆ. ಇದಕ್ಕೆ ಹೆಮ್ಮೆ ಪಡಬೇಕು. ಉತ್ತರ ಕರ್ನಾಟಕದ ದಿಗ್ಗಜರು ವಿಶ್ವಖ್ಯಾತಿ ಗಳಿಸಿದ್ದಾರೆ. ನಮ್ಮ ಮುಂದಿನ ಜನಾಂಗಕ್ಕೆ ದಾರಿದೀಪವಾಗುತ್ತಿದ್ದಾರೆ.

ಇಂತಹ ಸುಂದರ ಪರಿಸರದಲ್ಲಿ ಸಚಿವರಾದವರು ಅಪಸ್ವರ ಎತ್ತಬಾರದು. ಒಂದು ರಾಜ್ಯವನ್ನು ಒಡೆಯುವುದು ಎಂದರೆ ಅದು ಸುಲಭದ ಕೆಲಸವಲ್ಲ. ಪಾರ್ಲಿಮೆಂಟ್ ಕೈಗೊಳ್ಳಬೇಕಾದ ತೀರ್ಮಾನ. ಹೊಸ ತಾಲೂಕು ರಚಿಸುವುದೇ ಈಗ ಕಷ್ಟದ ಕೆಲಸವಾಗಿದೆ. ಕಂದಾಯ ಮತ್ತು ಪೊಲೀಸ್ ದಾಖಲೆಗಳನ್ನು ಹೊಸ ತಾಲೂಕಿಗೆ ವರ್ಗಾಯಿಸುವುದು ಕಷ್ಟದ ಕೆಲಸ. ಇವೆಲ್ಲ ಸಚಿವರಿಗೆ ತಿಳಿಯದ ಸಂಗತಿ ಏನಲ್ಲ. ರಾಜ್ಯವನ್ನು ವಿಭಜನೆ ಮಾಡಬೇಕು ಎಂದರೆ ಅದಕ್ಕೆ ಬಲವಾದ ಕಾರಣ ಬೇಕು. ಜನಸಾಮಾನ್ಯರಿಗೆ ಇಲ್ಲದ ಕಷ್ಟ ಈ ಸಚಿವರಿಗೆ ಮಾತ್ರ ಹೇಗೆ ಬಂದಿತೋ ತಿಳಿಯದು. ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಕಾಣಬೇಕು ಎಂದರೆ ಒಡಕು ಧ್ವನಿ ಕೈ ಬಿಡಬೇಕು. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಕ್ಕಳು ಪೈಪೋಟಿ ಎದುರಿಸಲು ಮಾನಸಿಕವಾಗಿ ಸಜ್ಜುಗೊಳ್ಳುತ್ತಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಪ್ರಾದೇಶಿಕ ಸಂಕುಚಿತ ಮನೋಭಾವ ಇಲ್ಲ. ಹೀಗಿರುವಾಗ ರಾಜಕಾರಣಿಗಳು ವಿಭಜನೆಯ ವಿಷ ಬೀಜ ಬಿತ್ತಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News