ತಂಜಾವೂರಿನಿಂದ ಕಳವುಗೈಯ್ಯಲಾಗಿದ್ದ ʼಜಗತ್ತಿನ ಪ್ರಥಮ ತಮಿಳು ಬೈಬಲ್ʼ ಲಂಡನ್ ನಗರದ ಮ್ಯೂಸಿಯಂನಲ್ಲಿ ಪತ್ತೆ

Update: 2022-07-01 14:16 GMT

ಚೆನ್ನೈ: ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಿಂದ 17 ವರ್ಷಗಳ ಹಿಂದೆ ಕಳವುಗೈಯ್ಯಲಾಗಿದ್ದ ಜಗತ್ತಿನ ಪ್ರಥಮ ತಮಿಳು ಬೈಬಲ್ ಲಂಡನ್‍ನ ಮ್ಯೂಸಿಯಂ ಒಂದರಲ್ಲಿ ಪತ್ತೆಯಾಗಿದೆ. ಈ ತಮಿಳು ಬೈಬಲ್  ಸುಮಾರು 300 ವರ್ಷಗಳ ಹಿಂದೆ ಮುದ್ರಣಗೊಂಡಿತ್ತು ಎನ್ನಲಾಗಿದ್ದು 2005ರಲ್ಲಿ ತಂಜಾವೂರಿನ ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ವಿದೇಶಿಗರ ಒಂದು ಗುಂಪು ಅದನ್ನು ಕಳವುಗೈದಿತ್ತು ಎಂದು ಶಂಕಿಸಲಾಗಿದೆ.

ಈ ತಮಿಳು ಬೈಬಲ್ ಅನ್ನು ಭಾರತಕ್ಕೆ  ವಾಪಸ್ ತರುವ ನಿಟ್ಟಿನಲ್ಲಿ ರಾಜ್ಯದ ಸಿಐಡಿ ಐಡಲ್ ವಿಂಗ್ ಶ್ರಮಿಸುತ್ತಿದೆ.

ಭಾರತಕ್ಕೆ ಆಗಮಿಸಿದ್ದ ಮೊದಲ ಪ್ರಾಟೆಸ್ಟೆಂಟ್ ಮಿಷನರಿ ಬಾರ್ಥಲೋಮಿಯೋಸ್ ಝೀಗೆನ್ಬಲ್ಗ್ ಈ ಬೈಬಲ್ ಅನ್ನು 1715-17 ನಡುವೆ ಅವರು ತಂಜಾವೂರಿನಲ್ಲಿ ಮುದ್ರಣಾಲಯವೊಂದನ್ನು ಸ್ಥಾಪಿಸಿದ ಬಳಿಕ ಮುದ್ರಿಸಿದ್ದರೆಂದು ತಿಳಿಯಲಾಗಿದೆ.

ಹಸ್ತಲಿಖಿತ ಬೈಬಲ್ ಅನ್ನು ಆಗಿನ ತಂಜಾವೂರ್ ಭೋಂಸ್ಲೆ ರಾಜವಂಶದ ಅರಸ ತುಲಾಜಿ ರಾಜಾಹ್ ಸೆರ್ಫೋಜಿ ಅವರಿಗೆ ಹಸ್ತಾಂತರಿಸಲಾಗಿತ್ತು.

ಅಕ್ಟೋಬರ್ 10, 2005ರಂದು  ತಂಜಾವೂರು ಜಿಲ್ಲೆಯ ಸೆರ್ಫೋಜಿ ಅರಮನೆಯ ಅಧಿಕಾರಿಗಳು  ಬೈಬಲ್ ಕಳವಾಗಿರುವ ಕುರಿತು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದರು. ಅಕ್ಟೋಬರ್ 17, 2017ರಂದು ಗ್ರಂಥಾಲಯದ ಪದಾಧಿಕಾರಿ  ಇ ರಾಜೇಂದ್ರನ್ ಅವರು ಸಿಐಡಿ ಐಡಲ್ ವಿಂಗ್‍ಗೆ ದೂರು ನೀಡಿದ ನಂತರ ಐಪಿಸಿ ಸೆಕ್ಷನ್ 380 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ಈ ಬೈಬಲ್ ಪತ್ತೆಹಚ್ಚಲು ವಿಶೇಷ ತಂಡ ಕೂಡ ರಚಿಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಬೈಬಲ್ ಕಳೆದುಹೋಗುವ ಕೆಲ ದಿನಗಳಿಗಿಂತ ಮುನ್ನ ವಿದೇಶಿ ತಂಡವೊಂದು ಆಗಮಿಸಿತ್ತು  ಹಾಗೂ ಬೈಬಲ್ ಮುದ್ರಿಸಿದ್ದ ಬಾರ್ಥೊಲೋಮಿಯೋಸ್ ಸಂಸ್ಮರಣಾ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರೆಂದು ತಿಳಿದು ಬಂದಿತ್ತು.

ಪೊಲೀಸ್ ಅಧಿಕಾರಿಗಳು ನಂತರ ಜಗತ್ತಿನ ಸಾವಿರಾರು ಮ್ಯೂಸಿಯಂಗಳ ವೆಬ್‍ಸೈಟ್‍ಗಳನ್ನು ಜಾಲಾಡಿದಾಗ ಕೊನೆಗೆ ಲಂಡನ್‍ನಲ್ಲಿನ  ಕಲೆಕ್ಷನ್ ಆಫ್ ಜಾರ್ಜ್ III ನಲ್ಲಿನ ನೂರಾರು ಪುಸ್ತಕಗಳು, ಹಸ್ತಪ್ರತಿಗಳು ಮುಂತಾದವುಗಳ ಜೊತೆಗೆ ತಮಿಳು ಬೈಬಲ್ ಇರುವುದೂ ಪತ್ತೆಯಾಗಿತ್ತು.

18ನೇ ಶತಮಾನದಲ್ಲಿ ತರಂಗಂಬಡಿಯ ಮುದ್ರಣಾಲಯದಲ್ಲಿ ಇದು ಮುದ್ರಣಗೊಂಡಿತ್ತಲ್ಲದೆ ಅದರಲ್ಲಿ ತಂಜಾವೂರಿನ ಅರಸ ರಾಜಾಹ್ ಸೆರ್ಫೋಜಿ ಅವರ ಸಹಿಯೂ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News