ಝುಬೈರ್ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪೊಲೀಸರ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Update: 2022-07-02 05:37 GMT

ಹೊಸದಿಲ್ಲಿ: ತಮ್ಮ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಝುಬೈರ್ ಅವರು ಸಲ್ಲಿಸಿದ್ದ ಅರ್ಜಿಯ ಮೇಲಿನ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಝುಬೈರ್ ಅವರ ಅರ್ಜಿ ಕುರಿತಂತೆ ದಿಲ್ಲಿ ಪೊಲೀಸರ ನಿಲುವನ್ನು ಕೇಳಿದೆ. ಈ ಕುರಿತಂತೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಧೀಶ ಸಂಜೀವ್ ನರೂಲ,  ಉತ್ತರಿಸಲು ದಿಲ್ಲಿ ಪೊಲೀಸರಿಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದಾರೆ.

ವಿಚಾರಣಾಧೀನ ನ್ಯಾಯಾಲಯವು ಜೂನ್ 28ರಂದು ಝುಬೈರ್ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಿತ್ತು. ಝುಬೈರ್ ಅವರು 2018ರಲ್ಲಿ ಮಾಡಿದ ಟ್ವೀಟ್ ಒಂದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬ ಆರೋಪ ಹೊರಿಸಿ ದಿಲ್ಲಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದರು.

ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದ್ದು ಈ ಅವಧಿಯಲ್ಲಿ ವಿಚಾರಣಾಧೀನ ನ್ಯಾಯಾಲಯವು ತನ್ನ ವಿಚಾರಣೆ ಮುಂದುವರಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ಝುಬೈರ್ ಅವರ ಪೊಲೀಸ್ ಕಸ್ಟಡಿ ಅವಧಿ ಜುಲೈ 2ರಂದು ಮುಗಿಯಲಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಇನ್ನೊಂದು ಪಕ್ಷದ ಅಭಿಪ್ರಾಯವನ್ನೂ ಆಲಿಸಬೇಕಿರುವುದರಿಂದ ನೋಟಿಸ್ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News