ಒಡೆಸಾ ಬಂದರಿನ ಮೇಲೆ ರಶ್ಯ ದಾಳಿ: ಕನಿಷ್ಟ 18 ಮಂದಿ ಮೃತ್ಯು

Update: 2022-07-01 17:32 GMT

 ಕೀವ್, ಜು.1: ಕಪ್ಪು ಸಮುದ್ರದಲ್ಲಿನ ಉಕ್ರೇನ್‌ನ ಅತ್ಯಂತ ಆಯಕಟ್ಟಿನ ಬಂದರು ನಗರ ಒಡೆಸಾದ ಮೇಲೆ ರಶ್ಯ ಕ್ಷಿಪಣಿ ದಾಳಿ ನಡೆಸಿದ್ದು , ಬಂದರಿನ ಬಳಿಯಿದ್ದ ಕಟ್ಟಡ ಮತ್ತು ರೆಸಾರ್ಟ್‌ಗೆ ವ್ಯಾಪಕ ಹಾನಿಯಾಗಿದೆ. ಕನಿಷ್ಟ 18 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ರಶ್ಯವು ಸೋವಿಯತ್ ಯುಗದ ನಿಖರತೆಯಿಲ್ಲದ ಕ್ಷಿಪಣಿಗಳನ್ನು ಪ್ರಯೋಗಿಸುತ್ತಿರುವುದರಿಂದ ಅವು ಗುರಿ ತಪ್ಪಿ ಜನವಸತಿ ಸ್ಥಳಗಳಿಗೆ ಅಪ್ಪಳಿಸುತ್ತಿದೆ ಎಂದು ಉಕ್ರೇನ್‌ನ ಸೇನಾಧಿಕಾರಿಗಳು ಆರೋಪಿಸಿದ್ದಾರೆ. ಸೋಮವಾರ ಕ್ರೆಮೆನ್‌ಚುಕ್‌ನ ಶಾಪಿಂಗ್ ಮಾಲ್‌ಗೆ ಅಪ್ಪಳಿಸಿದ ರಶ್ಯದ ಕ್ಷಿಪಣಿಯಿಂದ 18 ಮಂದಿ ಮೃತಪಟ್ಟಿದ್ದಾರೆ ಎಂದವರು ಹೇಳಿದ್ದಾರೆ.

ಒಡೆಸಾ ಬಂದರಿನ ಬಳಿಯ ಬಿಲ್‌ಹೊರೊಡ್-ನಿಸ್ಟ್ರೊವ್ಸ್ಕಿ ನಗರದ 9 ಮಹಡಿಯ ಕಟ್ಟಡಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ಕಟ್ಟಡಕ್ಕೆ ಹಾನಿಯಾಗಿದೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಸಾಧ್ಯತೆಯಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ. ಸಮೀಪದ ಕಟ್ಟಡದಲ್ಲೂ ಬೆಂಕಿ ಕಾಣಿಸಿಕೊಂಡು ವ್ಯಾಪಕ ನಷ್ಟ ಸಂಭವಿಸಿದೆ ಎಂದು ಉಕ್ರೇನ್‌ನ ತುರ್ತುಸೇವಾ ಇಲಾಖೆ ಹೇಳಿದೆ. ಮತ್ತೊಂದು ಕ್ಷಿಪಣಿ ಸಮೀಪದ ರೆಸಾರ್ಟ್‌ಗೆ ಅಪ್ಪಳಿಸಿದ್ದು ಮಗುವಿನ ಸಹಿತ ಕನಿಷ್ಟ 3 ಮಂದಿ ಮೃತಪಟ್ಟಿದ್ದು ಒಬ್ಬರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡೂ ದಾಳಿಗಳಲ್ಲಿ ಇಬ್ಬರು ಮಕ್ಕಳ ಸಹಿತ ಒಟ್ಟು 18 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ಅಧ್ಯಕ್ಷರ ಕಚೇರಿಯ ಉಪಮುಖ್ಯಸ್ಥ ಕಿರಿಲೊ ಟೈಮೊಶೆಂಕೊ ಹೇಳಿದ್ದಾರೆ. ಬುಧವಾರ ನಡೆದ ವಾಯುದಾಳಿಯ ಬಳಿಕ ಹಲವಾರು ಮಂದಿ ಈ ಕಟ್ಟಡದ ನೆಲಅಂತಸ್ತಿನಲ್ಲಿ ಆಶ್ರಯ ಪಡೆದಿದ್ದರು.

ಕಟ್ಟಡದ ಒಂದು ಭಾಗ ಕುಸಿದಿರುವುದರಿಂದ ಹಲವು ಮಂದಿ ಕಟ್ಟಡದ ಅವಶೇಗಳಡಿ ಸಿಲುಕಿರುವ ಸಾಧ್ಯತೆಯಿದೆ. ಸ್ಥಳೀಯರು ತಮ್ಮ ಕೈಗಳಿಂದಲೇ ಮಣ್ಣು, ಕಲ್ಲಿನ ರಾಶಿಯನ್ನು ಬದಿಗೆ ಸರಿಸಿ ಮಣ್ಣಿನಡಿ ಸಿಲುಕಿದ್ದವರನ್ನು ರಕ್ಷಿಸುವ ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅಲ್‌ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News