ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್: ಪಂತ್ ಶತಕ; ಭಾರತ ದಿಟ್ಟ ಹೋರಾಟ

Update: 2022-07-02 02:02 GMT
Photo: Twitter/@BCCI

ಬರ್ಮಿಂಗ್‍ಹ್ಯಾಮ್: ರಿಷಬ್ ಪಂತ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮಳೆಬಾಧಿತ ಮೊದಲ ದಿನ 7 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

ಒಂದು ಹಂತದಲ್ಲಿ 98 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡ ದಯನೀಯ ಸ್ಥಿತಿಯಲ್ಲಿದ್ದ ಭಾರತಕ್ಕೆ ಪಂತ್ (111 ಎಸೆತಗಳಲ್ಲಿ 146) ಆಸರೆಯಾದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ (163 ಎಸೆತಗಳಲ್ಲಿ 83) ಭಾರತದ ದಿಟ್ಟ ಹೋರಾಟಕ್ಕೆ ಕಾರಣರಾದರು. ಈ ಜೋಡಿ 293 ಎಸೆತಗಳಲ್ಲಿ 222 ರನ್ ಗಳಿಸಿ ಭಾರತದ ಸುಸ್ಥಿತಿಗೆ ಕಾರಣವಾಯಿತು.

ಆಕರ್ಷಕ, ಸಿಡಿಲಬ್ಬರದ ಬ್ಯಾಟಿಂಗ್‍ನಿಂದ ಇಂಗ್ಲೆಂಡ್ ಬೌಲರ್‍ಗಳ ಬೆವರಿಳಿಸಿದ ಪಂತ್ 20 ಬೌಂಡರಿ ಮತ್ತು ನಾಲ್ಕು ಸಿಕ್ಸರ್‍ಗಳನ್ನು ಸಿಡಿಸಿದರು. ಮೊದಲ ದಿನ ಮಳೆಯಿಂದಾಗಿ ಕೇವಲ 73 ಓವರ್‍ಗಳ ಆಟ ಮಾತ್ರ ಸಾಧ್ಯವಾಯಿತು.

ಬಿಳಿಯ ಚೆಂಡಿನ ಕ್ರಿಕೆಟ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಕುಂಟುತ್ತಿರುವ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಪಂತ್, ಕೆಂಪು ಚೆಂಡಿನಲ್ಲಿ ಇದಕ್ಕೆ ಉತ್ತರ ನೀಡಿ, ವಿದೇಶದಲ್ಲಿ ನಾಲ್ಕನೇ ಹಾಗೂ ವೃತ್ತಿಜೀವನದ ಐದನೇ ಶತಕ ಗಳಿಸಿದರು. ಪ್ರತಿಕೂಲ ಪರಿಸ್ಥಿತಿಯಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಅತಿಥೇಯ ತಂಡದ ಹತಾಶೆಗೆ ಕಾರಣರಾದರು.

ತಮ್ಮ ಸಾಂಪ್ರದಾಯಿಕ ಹೊಡೆತಗಳ ಜತೆಗೆ ಜೇಮ್ಸ್ ಆ್ಯಂಡರ್ಸನ್ ಅವರಂಥ ಉತ್ತಮ ಬೌಲರ್ ವಿರುದ್ಧವೂ ಅಬ್ಬರಿಸಿದ ಅವರು, ಭಾರತೀಯ ವಿಕೆಟ್ ಕೀಪರ್‍ನ ಅತಿವೇಗದ ಶತಕ (89 ಎಸೆತ) ದಾಖಲಿಸಿದರು. ದಿನದ ಆಟದ ಕೊನೆಯ ವೇಳೆಗೆ ಇವರ ಅದ್ಭುತ ಇನಿಂಗ್ಸ್‍ಗೆ ಜೋ ರೂಟ್ ಮಂಗಳ ಹಾಡಿದರು.

ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ ಅವರು ವಿರಾಟ್ ಕೊಹ್ಲಿ (11) ಮತ್ತು ಹನುಮ ವಿಹಾರಿ (20) ಅವರ ಅಮೂಲ್ಯ ವಿಕೆಟ್‍ಗಳನ್ನು ಪಡೆದು ಅತಿಥೇಯರಿಗೆ ಮುನ್ನಡೆ ದೊರಕಿಸಿಕೊಟ್ಟರು. ಇದಕ್ಕೂ ಮುನ್ನ ವಿದೇಶದಲ್ಲಿ ಮೊದಲ ಟೆಸ್ಟ್ ಆಡುತ್ತಿರುವ ಶ್ರೇಯಸ್ ಅಯ್ಯರ್ (15), ಶುಭಮನ್ ಗಿಲ್ (17) ಮತ್ತು ಚೇತೇಶ್ವರ ಪೂಜಾರ (13) ಅವರನ್ನು ಪೆವಿಲಿಯನ್‍ಗೆ ಕಳುಹಿಸಿದ ಆ್ಯಂಡರ್ಸನ್ ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News