ಜು.6ರಂದು ಮೀಫ್ ಎಕ್ಸಲೆನ್ಸ್ ಅವಾರ್ಡ್ 2022; ಐಎಎಸ್ ಓರಿಯೆಂಟೇಶನ್ ಕಾರ್ಯಕ್ರಮ ಆರಂಭ

Update: 2022-07-02 12:27 GMT

ಮಂಗಳೂರು, ಜು. 2: ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ (ಮೀಫ್)ದ ವತಿಯಿಂದ ಜುಲೈ 6ರಂದು ವಾರ್ಷಿಕ ಕೂಟವನ್ನು ಕಂಕನಾಡಿಯ ಜಮಿಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮೀಫ್ ಶಾಲೆಗಳು ಸೇರಿದಂತೆ ದ.ಕ. ಮತ್ತು ಉಡುಪಿ ಜಿಲ್ಲೆಯ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ರಾಜ್ಯ ಮಟ್ಟದ ಟಾಪರ್‌ ಗಳಿಗೆ ಮೀಫ್ ಎಕ್ಸಲೆನ್ಸ್ ಅವಾರ್ಡ್ 2022 ನೀಡಿ ಗೌರವಿಸಲಾಗುವುದು. ಮತ್ತು ಇದೇ ವೇಳೆ ಐಎಎಸ್ ಓರಿಯೆಂಟೇಶನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಇತ್ತೀಚೆಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಡ್ ಪದವಿ ಪಡೆದಿರುವ ಯೆನೆಪೊಯ ವಿವಿಯ ಕುಲಪತಿ ಡಾ. ವೈ. ಅಬ್ದುಲ್ಲಾ ಕುಂಞಿ ಅವರನ್ನು ಸನ್ಮಾನಿಸಲಾಗುವುದು.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಸರಕಾರದ ಭರವಸೆಗಳ ವಿಧಾನ ಪರಿಷತ್ ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮೀಫ್‍ನ ಗೌರವ ಅಧ್ಯಕ್ಷ ಉಮರ್ ಟೀಕೆ ದಿಕ್ಸೂಚಿ ಭಾಷಣ ಮಾಡಲಿದ್ದು, ಮೀಫ್‍ನ ಗೌರವ ಸಲಹೆಗಾರ ಸಯ್ಯದ್ ಬ್ಯಾರಿ ಮೀಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ದ.ಕ. ಜಿಲ್ಲಾ ಡಿಡಿಪಿಯು ಸಿ.ಡಿ. ಜಯಣ್ಣ, ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ಮಲಗೆ, ದ.ಕ. ಡಿಡಿಪಿಐ ಸುಧಾಕರ್, ಉಡುಪಿ ಡಿಡಿಪಿಐ ಗೋವಿಂದ ಮಡಿವಾಳ, ಎಸಿಇ ಐಎಎಸ್ ಅಕಾಡಮಿಯ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮೀಫ್ ಪ್ರಕಟನೆ ತಿಳಿಸಿದೆ.

ಮೀಫ್ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಸಂಘವಾಗಿದ್ದು, ಪ್ರಸ್ತುತ ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಮೇಲೆ ಕೇಂದ್ರೀಕರಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 135 ಶಾಲೆಗಳು ಮೀಫ್‍ನ ಸದಸ್ಯರಾಗಿದ್ದಾರೆ.

ಶಿಕ್ಷಣ ಮಾಧ್ಯಮ ಮತ್ತು ಇತರ ಶಿಕ್ಷಣ ಸಂಬಂಧಿತ ಸಮಸ್ಯೆಗಳಿಗೆ ಅಲ್ಪಸಂಖ್ಯಾತ ಸಂಸ್ಥೆಗಳ ಕಾನೂನು ಬದ್ಧ ಹಕ್ಕುಗಳ ಹೋರಾಟದಲ್ಲಿ ಮೀಫ್ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಫಲಿತಾಂಶ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ನಿರಂತರ ತರಬೇತಿಯ ಬಗ್ಗೆ ಮೀಫ್ ಗಮನ ಹರಿಸುತ್ತದೆ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಅನೇಕ ಓರಿಯಂಟೇಶನ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು,‌ ಇದು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News