ಬಿರುಗಾಳಿಗೆ ಸಿಕ್ಕಿ ಇಬ್ಬಾಗವಾದ ನೌಕೆ: 24ಕ್ಕೂ ಅಧಿಕ ಸಿಬ್ಬಂದಿಗಳು ನಾಪತ್ತೆ

Update: 2022-07-02 15:51 GMT

 ಹಾಂಕಾಂಗ್, ಜು.2: ಶನಿವಾರ ದಕ್ಷಿಣ ಚೀನಾ ಸಮುದ್ರದಲ್ಲಿ ಬೀಸಿದ ತೂಫಾನ್(ಸುಂಟರಗಾಳಿ)ಗೆ ಸಿಲುಕಿದ ನಾವೆಯೊಂದು ಇಬ್ಬಾಗವಾಗಿದ್ದು ನೌಕೆಯಲ್ಲಿದ್ದ 24ಕ್ಕೂ ಅಧಿಕ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಹಾಂಕಾಂಗ್ನ ನೈಋತ್ಯಕ್ಕೆ 160 ನಾಟಿಕಲ್ ಮೈಲು ದೂರದಲ್ಲಿದ್ದಾಗ ತೂಫಾನಿಗೆ ಸಿಲುಕಿದ ನೌಕೆಗೆ ವ್ಯಾಪಕ ಹಾನಿಯಾಗಿದ್ದು ಬಳಿಕ ಇಬ್ಬಾಗವಾಗಿದೆ. ನೌಕೆಯಲ್ಲಿದ್ದ 30 ಸಿಬಂದಿಗಳು ನೌಕೆಯನ್ನು ತೊರೆದಿದ್ದಾರೆ. ಇವರಲ್ಲಿ 3 ಮಂದಿಯನ್ನು ರಕ್ಷಿಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಾಂಕಾಂಗ್ ಸರಕಾರದ ಹೇಳಿಕೆ ತಿಳಿಸಿದೆ. 
ಸಮುದ್ರದಲ್ಲಿ ಅರ್ಧ ಮುಳುಗಿರುವ ನೌಕೆಯಲ್ಲಿದ್ದ ಓರ್ವ ವ್ಯಕ್ತಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ವೀಡಿಯೊವನ್ನು ಹಾಂಕಾಂಗ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಉಳಿದ ಸಿಬಂದಿಗಳು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗಿರುವ ಸಾಧ್ಯತೆಯಿದೆ ಎಂದು ರಕ್ಷಿಸಲ್ಪಟ್ಟಿರುವ ಮೂವರು ಹೇಳಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಮಧ್ಯಭಾಗದಲ್ಲಿ ರೂಪುಗೊಂಡಿರುವ ಛಾಬಾ ತೂಫಾನು ಶನಿವಾರ ಮಧ್ಯಾಹ್ನ ದಕ್ಷಿಣ ಚಿನಾದ ಗ್ವಾಂಗ್ಡಾಂಗ್ ಪ್ರಾಂತಕ್ಕೆ ಅಪ್ಪಳಿಸಿದೆ.
 ಹಡಗು ಅಪಘಾತಕ್ಕೆ ಒಳಗಾದ ಸಂದರ್ಭ ಗಂಟೆಗೆ 144 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು 10 ಮೀಟರ್ ಎತ್ತರದ ಸಮುದ್ರದ ಅಲೆಗಳು ರೂಪುಗೊಂಡಿದ್ದವು . ಈಗಲೂ ತೂಫಾನ್ನ ಅಬ್ಬರ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. 
ಹಾಂಕಾಂಗ್ ಸರಕಾರ 2 ವಿಮಾನ,4 ಹೆಲಿಕಾಪ್ಟರ್ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದ್ದರೆ ಚೀನಾವು ತಟರಕ್ಷಣಾ ಪಡೆಯ ದೋಣಿಯನ್ನು ರವಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News