ವಿಂಬಲ್ಡನ್; ವಿಶ್ವದ ನಂಬರ್ 1 ಆಟಗಾರ್ತಿಯ ಜಯದ ಸರಣಿ ಅಂತ್ಯ

Update: 2022-07-03 03:07 GMT
ಇಗಾ ಸ್ವಿಯಾಟೆಕ್

ನ್ಯೂಯಾರ್ಕ್; ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು ನೇರ ಸೆಟ್‍ಗಳಲ್ಲಿ ಕೆಡವಿದ ಫ್ರಾನ್ಸ್ ನ ಅನುಭವಿ ಆಟಗಾರ್ತಿ ಅಲಿಜಾ ಕಾರ್ನೆಟ್ ನಾಲ್ಕನೇ ಸುತ್ತಿಗೆ ಮುನ್ನಡೆದಿದ್ದಾರೆ. ಈ ಸೋಲಿನೊಂದಿಗೆ ಸ್ವಿಯಾಟೆಕ್ ಅವರ 37 ಪಂದ್ಯಗಳ ನಿರಂತರ ಜಯದ ಸರಪಣಿ ಕಡಿದಂತಾಗಿದೆ.

ಮೂರನೇ ಸುತ್ತಿನ ಪಂದ್ಯದಲ್ಲಿ ಪೋಲಂಡ್‍ನ ಎದುರಾಳಿಯ ತಪ್ಪುಗಳ ಲಾಭ ಪಡೆದ ಕಾರ್ನೆಟ್ 6-4, 6-2 ನೇರ ಸಟ್‍ಗಳ ಜಯ ಸಾಧಿಸಿದರು.

ಕಾರ್ನೆಟ್ ಪ್ರಸ್ತುತ 37ನೇ ರ‍್ಯಾಂಕಿಂಗ್ ಹೊಂದಿದ್ದಾರೆ. ಪಂದ್ಯದ ಆರಂಭದಿಂದಲೇ ಹಿನ್ನಡೆಯಲ್ಲಿದ್ದ ಅಗ್ರ ಶ್ರೇಯಾಂಕದ ಆಟಗಾರ್ತಿ ಮೊದಲ ಎರಡು ಸರ್ವೀಸ್‍ಗಳನ್ನು ಕಳೆದುಕೊಂಡರು. 20 ವರ್ಷದ ಆಟಗಾರ್ತಿ ಎರಡನೇ ಸೆಟ್‍ನಲ್ಲಿ ಸರ್ವೀಸ್ ಬ್ರೇಕ್ ಮಾಡುವ ಅವಕಾಶ ಪಡೆದರು. ಆದರೆ ಕಾರ್ನೆಟ್ ತಕ್ಷಣವೇ ಎದುರಾಳಿಯ ಸರ್ವೀಸ್ ಬ್ರೇಕ್ ಮಾಡಿದ್ದಲ್ಲದೇ ಮತ್ತೆರಡು ಬಾರಿ ಸರ್ವೀಸ್ ಬ್ರೇಕ್ ಮಾಡುವ ಮೂಲಕ ಪಂದ್ಯವನ್ನು ಗೆದ್ದರು.

ಅಚ್ಚರಿ ಎಂಬಂತೆ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿದ ಸ್ವಿಯಾಟೆಕ್, 33 ಪ್ರಮಾದಗಳನ್ನು ಎಸಗಿದರು. ಕಳೆದ ಫೆಬ್ರುವರಿಯಲ್ಲಿ ದುಬೈನಲ್ಲಿ ಸ್ವಿಯಾಟಿಕ್ ಜೆಲೇನಾ ಓಸ್ಟಾಪೆಂಕೊ ವಿರುದ್ಧ ಪಂದ್ಯ ಕಳೆದುಕೊಂಡ ಬಳಿಕ ಸ್ವಿಯಾಟೆಕ್ ಫ್ರೆಂಚ್ ಓಪನ್ ಸೇರಿದಂತೆ ಕಳೆದ ಆರು ಟೂರ್ನಿಗಳಲ್ಲಿ ಯಾವ ಪಂದ್ಯವನ್ನೂ ಕಳೆದುಕೊಂಡಿರಲಿಲ್ಲ.

ಸತತ 62 ಗ್ರ್ಯಾಂಡ್‍ಸ್ಲಾಂಗಳಲ್ಲಿ ಸ್ಪರ್ಧಿಸಿರುವ ಕಾರ್ನೆಟ್, ಎಐ ಸುಗಿಯಾಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2014ರ ವಿಂಬಲ್ಡನ್ ಮೂರನೇ ಸುತ್ತಿನಲ್ಲಿ ಕಾರ್ನೆಟ್, ಸೆರೇನಾ ವಿಲಿಯಮ್ಸ್ ಗೆ ಆಘಾತ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News