ಸಿಬ್ಬಂದಿಗಳಿಂದ ಸಾಮೂಹಿಕ ಅನಾರೋಗ್ಯ ರಜೆ: ಇಂಡಿಗೋದ ಹಲವಾರು ಯಾನಗಳು ವಿಳಂಬ

Update: 2022-07-03 14:52 GMT

ಹೊಸದಿಲ್ಲಿ,ಜು.3: ಸಿಬ್ಬಂದಿಗಳ ಅಲಭ್ಯತೆಯಿಂದಾಗಿ ದೇಶದ ಹಲವಾರು ಕಡೆಗಳಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಯಾನಗಳು ವಿಳಂಬ ಸಮಸ್ಯೆಯನ್ನು ಎದುರಿಸುತ್ತಿವೆ. ಶನಿವಾರ ಇಂಡಿಗೋದ ಕೇವಲ ಶೇ.45ರಷ್ಟು ಯಾನಗಳು ಸಮಯಕ್ಕೆ ಸರಿಯಾಗಿ ನಿರ್ವಹಿಸಲ್ಪಟ್ಟಿದ್ದವು ಎಂದು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯವು ಮಾಹಿತಿಯನ್ನು ನೀಡಿದೆ.

ಶನಿವಾರ ಇಂಡಿಗೋದ ಗಣನೀಯ ಸಂಖ್ಯೆಯ ಕ್ಯಾಬಿನ್ ಸಿಬ್ಬಂದಿಗಳು ಅನಾರೋಗ್ಯ ರಜೆಯನ್ನು ಪಡೆದುಕೊಂಡು ಏರ್‌ಇಂಡಿಯಾದ ಎರಡನೇ ಹಂತದ ನೇಮಕಾತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ತೆರಳಿದ್ದರು ಎಂದು ಉದ್ಯಮದ ಅಧಿಕಾರಿಯೋರ್ವರು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ವಿಮಾನಯಾನಗಳಲ್ಲಿ ಭಾರೀ ವಿಳಂಬದ ಕುರಿತು ಇಂಡಿಗೋದಿಂದ ವಿವರಣೆಯನ್ನು ಕೇಳಿದೆ.

ಅಗ್ಗದ ದರಗಳ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರತಿ ದಿನ 1,600ಕ್ಕೂ ಅಧಿಕ ದೇಶಿಯ ಮತ್ತು ವಿದೇಶಿ ಯಾನಗಳನ್ನು ನಿರ್ವಹಿಸುತ್ತಿದೆ. ಶನಿವಾರ ಅದರ ಅರ್ಧಕ್ಕೂ ಹೆಚ್ಚಿನ ಯಾನಗಳು ವಿಳಂಬಗೊಂಡಿದ್ದವು. ಕೋವಿಡ್ ಸಾಂಕ್ರಾಮಿಕದ ಆರಂಭದಲ್ಲಿ ಹೇರಲಾಗಿದ್ದ ವೇತನ ಕಡಿತವನ್ನು ಮುಂದುವರಿಸಿರುವುದಕ್ಕಾಗಿ ಇಂಡಿಗೋದ ಸಿಬ್ಬಂದಿಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News