ಉದಯಪುರ ಹತ್ಯೆ: ಡಬಲ್ ಏಜೆಂಟ್ ಆಗಿದ್ದನೇ ರಿಯಾಝ್ ಅತ್ತಾರಿ ?

Update: 2022-07-04 12:41 GMT

ಭಾರತವು ಎದುರಿಸುತ್ತಿರುವ ಆಘಾತಗಳ ಸರಮಾಲೆ ಸದ್ಯೋಭವಿಷ್ಯದಲ್ಲಿ ಕೊನೆಗೊಳ್ಳುವುದಿಲ್ಲ ಎಂಬಂತೆ ಕಾಣುತ್ತಿದೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ ಶರ್ಮಾ ಪ್ರವಾದಿ ಮುಹಮ್ಮದ್‌ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಛೀಮಾರಿ ಹಾಕಿದೆ.

ತನ್ನ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ವಿಚಾರಣೆಗಾಗಿ ದಿಲ್ಲಿಗೆ ವರ್ಗಾಯಿಸಬೇಕು ಎಂದು ಕೋರಿ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ  ಸೂರ್ಯಕಾಂತ ಅವರು, ‘ಇಂದು ದೇಶದಲ್ಲಿ ಏನು ಸಂಭವಿಸುತ್ತಿದೆಯೋ ಅದಕ್ಕೆ ಶರ್ಮಾ ಏಕೈಕ ಹೊಣೆಗಾರರಾಗಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ದೇಶದ ಕ್ಷಮೆ ಯಾಚಿಸುವಂತೆಯೂ ಅವರು ಶರ್ಮಾಗೆ ಸೂಚಿಸಿದ್ದರು.

ತನ್ನ ಹಿಂದೆ ಅಧಿಕಾರ ಬಲವಿರುವುದರಿಂದ ತಾನು ಏನು ಬೇಕಾದರೂ ಹೇಳಬಹುದು ಎಂದು ಶರ್ಮಾ ಭಾವಿಸಿದ್ದಾರೆ ಎಂದು ನ್ಯಾಯಮೂರ್ತಿಗಳು ಬೆಟ್ಟು ಮಾಡಿದ್ದರು.

ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವಲ್ಲಿ ದಿಲ್ಲಿ ಪೊಲೀಸರ ಇಬ್ಬಗೆ ನಿಲುವನ್ನು ನ್ಯಾ.ಸೂರ್ಯಕಾಂತ ತರಾಟೆಗೆತ್ತಿಕೊಂಡಿದ್ದರು. ಕೆಲವು ಎಫ್‌ಐಆರ್‌ಗಳಲ್ಲಿ ತ್ವರಿತ ಬಂಧನಗಳನ್ನು ಮಾಡಿರುವ ದಿಲ್ಲಿ ಪೊಲೀಸರು ಪ್ರಸಕ್ತ ಪ್ರಕರಣದಲ್ಲಿಯಂತೆ ಇತರ ಕೆಲವರನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಈ ಪ್ರಕರಣದಲ್ಲಿ ಆರೋಪಿಗೆ ‘ರೆಡ್ ಕಾರ್ಪೆಟ್’ಗಾಗಿ ಕಾಯುತ್ತಿರುವಂತೆ ಕಂಡು ಬರುತ್ತಿದೆ.

ಭಾರತದಲ್ಲಿ ಈಗ ಕಾನೂನು ತಿಳಿದಿರುವ ಮಾರ್ಗವನ್ನು ಅನುಸರಿಸುವಷ್ಟು ತನ್ನದೇ ಮಾರ್ಗದಲ್ಲಿ ಸಾಗುತ್ತಿಲ್ಲ ಎಂಬ ಸಾಮಾನ್ಯ ಗ್ರಹಿಕೆಗೆ ನ್ಯಾಯಮೂರ್ತಿಗಳ ಅಭಿಪ್ರಾಯ ಪುಷ್ಟಿ ನೀಡಿದೆ.

ಉದಯಪುರದಲ್ಲಿ ಟೈಲರ್ ಕನ್ಹಯಲಾಲ್ ಬರ್ಬರ ಹತ್ಯೆಯು ಶರ್ಮಾರ ಹೇಳಿಕೆಯ ಒಂದು ದುರಂತಮಯ ಪರಿಣಾಮವಾಗಿದೆ. ಶರ್ಮಾರ ಹೇಳಿಕೆಯನ್ನು ಅವರು ಬೆಂಬಲಿಸಿದ್ದರು. ಆರೋಪಿಗಳಾದ ಮುಹಮ್ಮದ್ ಗೌಸ್ ಮತ್ತು ರಿಯಾಝ್ ಅಟ್ಟಾರಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ರಾಜಸ್ಥಾನದ ಮಾಜಿ ಬಿಜೆಪಿ ಸಚಿವ ಹಾಗೂ ಹಾಲಿ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಗುಲಾಬಚಂದ್ ಕಟಾರಿಯಾ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಅಟ್ಟಾರಿಯ ಒಡನಾಟವನ್ನು ತೋರಿಸುವ ಫೋಟೊಗಳನ್ನು ಕಾಂಗ್ರೆಸ್ ಬಹಿರಂಗಗೊಳಿಸಿದಾಗ ಶರ್ಮಾರ ತಪ್ಪು, ಸರ್ವೋಚ್ಚ ನ್ಯಾಯಾಲಯದ ಪ್ರಾಸಂಗಿಕ ಅಭಿಪ್ರಾಯ ಮತ್ತು ಟೈಲರ್ ಹತ್ಯೆಯಿಂದ ಉಂಟಾಗಿದ್ದ ಪ್ರಕ್ಷುಬ್ಧತೆ ಇನ್ನೂ ಶಮನಗೊಂಡಿರಲಿಲ್ಲ. ಒಂದು ಫೋಟೊದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ಇರ್ಷಾದ್ ಚೈನ್‌ವಾಲಾ ಮತ್ತು ಅಟ್ಟಾರಿಯೊಂದಿಗೆ ಕಟಾರಿಯಾರನ್ನು ಕಾಣಬಹುದು. ಇತರ ಫೋಟೊಗಳು ಉದಯಪುರದ ಹಿರಿಯ ಬಿಜೆಪಿ ನಾಯಕ ರವೀಂದ್ರ ಶ್ರೀಮಾಲಿ ಅವರೊಂದಿಗೆ ಅಟ್ಟಾರಿ ಇರುವುದನ್ನು ತೋರಿಸಿವೆ.

ಊಹಿಸಿದ್ದಂತೆಯೇ ಕಟಾರಿಯಾ ಪಕ್ಷದ ಓರ್ವ ನಾಯಕನಾಗಿ ತಾನು ಅಲ್ಪಸಂಖ್ಯಾತರ ಘಟಕಕ್ಕೆ ಭೇಟಿ ನೀಡಿದ್ದೆ ಮತ್ತು ಅಲ್ಲಿದ್ದ ಪ್ರತಿಯೊಬ್ಬರೂ ತನಗೆ ತಿಳಿದಿರುವವರೇ ಆಗಿದ್ದರು ಎಂದು ನಿರೀಕ್ಷಿಸಬಾರದು ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಕಟಾರಿಯಾಗೆ ಪರಿಚಿತರಾಗಿರುವ ಬಿಜೆಪಿಯ ಮುಹಮ್ಮದ್ ತಾಹಿರ್ ಅವರ ನವಂಬರ್ 2019ರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅಟ್ಟಾರಿಯನ್ನು ‘ಬಿಜೆಪಿ ಕಾರ್ಯಕರ್ತ ’ಎಂದು ಉಲ್ಲೇಖಿಸಲಾಗಿತ್ತು. ರಾಜಸ್ಥಾನದ ಗೃಹ ರಾಜ್ಯಸಚಿವ ರಾಜೇಂದ್ರ ಸಿಂಗ್ ಯಾದವ ಅವರು ಅಟ್ಟಾರಿ ಕಟಾರಿಯಾರ ಮತಗಟ್ಟೆ ಏಜೆಂಟ್ ಆಗಿದ್ದ ಎಂದು ಹೇಳಿದ್ದಾರೆ.

ಸತ್ಯವೇನು ಎನ್ನುವ ಬಗ್ಗೆ ತನಿಖೆಗಾಗಿ ತನ್ನ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಕಟಾರಿಯಾ ಹೇಳಿದ್ದಾರ. ಶ್ರೀಮಾಲಿ ಕೂಡ ತಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಪ್ರಶ್ನೆಗಳು
ಈ ಅಸ್ಪಷ್ಟ ವಿದ್ಯಮಾನಗಳ ಕುರಿತು ಸತ್ಯವನ್ನು ಬಯಲಿಗೆಳೆಯಬೇಕು ಎಂದು ಕಾನೂನಿಗೆ ವಿಧೇಯರಾಗಿರುವ ಯಾವುದೇ ನಾಗರಿಕನು ನಿರೀಕ್ಷಿಸಬಹುದು.

ಉತ್ತರಗಳನ್ನು ಬೇಡುವ ಕೆಲವು ಪ್ರಶ್ನೆಗಳಿಲ್ಲಿವೆ...

►ಈ ರಿಯಾಝ್ ಅಟ್ಟಾರಿ ನಿಜಕ್ಕೂ ಯಾರು?

►ಕಾಂಗ್ರೆಸ್ ಹಂಚಿಕೊಂಡಿರುವ ಫೋಟೋಗಳು ನಿಜವೇ ಅಥವಾ ಅವುಗಳನ್ನು ಮಾರ್ಫ್ ಮಾಡಲಾಗಿದೆಯೇ?

►ಅಟ್ಟಾರಿ ಬಿಜೆಪಿಯ ಸದಸ್ಯನಾಗಿದ್ದನೇ? ಹೌದಾದರೆ ಕನ್ಹಯಲಾಲ್ ಹತ್ಯೆ ಮಾಡಿದಾಗಲೂ ಆತ ಸದಸ್ಯನಾಗಿದ್ದನೇ?

►ಅಟ್ಟಾರಿ ರಾಕ್ಷಸ ಪ್ರವೃತ್ತಿಯವನೇ ಅಥವಾ ಆತ ಭಾರತದಲ್ಲಿ ‘ರಾಷ್ಟ್ರವಾದಿ’ಗಳಿಗಾಗಿ ಮತ್ತು ಇತರೆಡೆಯಲ್ಲಿ ‘ಭಯೋತ್ಪಾದಕ’ರಿಗಾಗಿ ಕೆಲಸ ಮಾಡುತ್ತಿದ್ದ ಡಬಲ್ ಏಜೆಂಟ್ ಆಗಿದ್ದನೇ?

►ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಅಷ್ಟೊಂದು ಚುರುಕಾಗಿ ರಾಜಸ್ಥಾನ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದು ಏಕೆ?
ಏನಾದರೂ ಅಹಿತಕಾರ ಮಾಹಿತಿ ಬಯಲಾಗಬಹುದು ಎಂದು ಅದು ಹೆದರಿದೆಯೇ?

ಬಿಜೆಪಿ ನಾಯಕರೊಂದಿಗೆ ಅಟ್ಟಾರಿಯ ಫೋಟೊಗಳು ಸಾಲದು ಎಂಬಂತೆ ಭದ್ರತಾ ಪಡೆಗಳಿಂದ ಬಂಧಿಸಲ್ಪಟ್ಟಿರುವ ಲಷ್ಕರ್ ಕಮಾಂಡರ್‌ನೋರ್ವ ಮೇ ತಿಂಗಳಿನಲ್ಲಿ ಅಲ್ಪಸಂಖ್ಯಾತರಿಗಾಗಿ ಬಿಜೆಪಿಯ ಸಾಮಾಜಿಕ ಮಾಧ್ಯಮ ಘಟಕದ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಎಂಬ ಸುದ್ದಿಯೊಂದು ಈಗ ಜಮ್ಮು-ಕಾಶ್ಮೀರದಿಂದ ಬಂದಿದೆ.

ಭಾರತೀಯ ರಾಜಕೀಯ ನೀತಿಶಾಸ್ತ್ರ ಮತ್ತು ಅದರ ಕಾನೂನುಬದ್ಧ ಮತ್ತು ಸಾಂವಿಧಾನಿಕ ಬೇರುಗಳ ಮರುಸ್ಥಾಪನೆಯ ಜನರ ಬಯಕೆ ಎಷ್ಟೊಂದು ತೀವ್ರವಾಗಿ ಅವನತಿಯತ್ತ ಸಾಗಿದೆ ಎಂದರೆ ರಾಜಕೀಯದಲ್ಲಿ ಹತಾಶ ಭಾವನೆ ಪ್ರಬಲವಾಗಿರುವಂತಿದೆ.

ಪ್ರಾಯಶಃ ಯುಗಧರ್ಮದ ಅತ್ಯಂತ ಕುತೂಹಲಕರ ಅಂಶವೆಂದರೆ ದೇಶದ ನೈತಿಕ ಮತ್ತು ಸಾಂಸ್ಥಿಕ ಆರೋಗ್ಯದ ಕುರಿತು ನಂ.1 ವ್ಯಕ್ತಿಯ ಗಾಢಮೌನವು ಹೇಗಾದರೂ ಸರಿ, ಅಂದುಕೊಂಡಿದ್ದನ್ನು ಮಾಡಲೇಬೇಕು ಎನ್ನುವುದನ್ನು ಉತ್ತೇಜಿಸುತ್ತಿದೆ.

ಗಣರಾಜ್ಯವು ಈಗ ರಾಜಕೀಯದ ಎಲ್ಲ ವಿಭಾಗಗಳ ಪುನರುಜ್ಜೀವನಕ್ಕಾಗಿ ಮತ್ತು ಅಧಿಕಾರವನ್ನು ಹೊಂದಿರುವವರ ಆತ್ಮಸಾಕ್ಷಿಗಾಗಿ ರೋದಿಸುತ್ತಿದೆ.

ಖಂಡಿತವಾಗಿಯೂ ಅಚ್ಛೇ ದಿನ್ ಜೊತೆಗೆ ದೇಶದ ಪ್ರಯತ್ನವನ್ನು ಇನ್ನೂ ಎರಡು ವರ್ಷಗಳ ಕಾಲ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ನಂತರ?

Writer - ಬದ್ರಿ ರೈನಾ - thewire.in

contributor

Editor - ಬದ್ರಿ ರೈನಾ - thewire.in

contributor

Similar News