ಅಮರಾವತಿ ಕೆಮಿಸ್ಟ್ ಹತ್ಯೆ: ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ ದಾಖಲು

Update: 2022-07-04 12:24 GMT

ಮುಂಬೈ: ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರು ಪ್ರವಾದಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿದ್ದಾರೆಂಬ ಕಾರಣಕ್ಕೆ ಹತ್ಯೆಯಾಗಿದ್ದಾರೆಂದು ತಿಳಿಯಲಾದ ಅಮರಾವತಿಯ 54 ವರ್ಷದ ಕೆಮಿಸ್ಟ್ ಉಮೇಶ್ ಕೊಲ್ಹೆ ಅವರ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಕೋತ್ವಾಲಿ ನಗರ ಪೊಲೀಸರು ಇಂದು ಅಕ್ರಮ ಚಟುವಟಿಕೆಗೆ ನಿಯಂತ್ರಣ ಕಾಯಿದೆ (ಯುಎಪಿಎ) ಅನ್ವಯವೂ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಇಂದು ರಾಷ್ಟ್ರೀಯ ತನಿಖಾ ಏಜನ್ಸಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

ಯುಎಪಿಎ ಇದರ ಸೆಕ್ಷನ್ 16 ಹಾಗೂ ಸೆಕ್ಷನ್ 20 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿರುವ ಪೊಲೀಸರು ಈ ಹತ್ಯೆಯನ್ನು ಜನರನ್ನು ಭಯಭೀತಗೊಳಿಸಲು ಯತ್ನಿಸಲು ನಡೆಸಿದ್ದರಿಂದ ಈ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಏಳು ಆರೋಪಿಗಳ ಪೈಕಿ ಅತಿಬ್ ರಶೀದ್ ಎಂಬಾತನನ್ನು ನ್ಯಾಯಾಂಗ ಬಂಧಕ್ಕೆ ಕಳುಹಿಸಲಾಗಿದೆ. ಉಳಿದ ನಾಲ್ಕು ಮಂದಿಯ ಪೊಲೀಸ್ ಕಸ್ಟಡಿ ಇಂದು ಮುಗಿಯಲಿದ್ದು ಅವರನ್ನು ಇಂದು ಎನ್‍ಐಎ ತನ್ನ ಕಸ್ಟಡಿಗೆ ಪಡೆದುಕೊಳ್ಳುವ ನಿರೀಕ್ಷೆಯದೆ. ಆರನೇ ಆರೋಪಿ ಡಾ ಯೂಸುಫ್ ಖಾನ್ ಈಗಲೂ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪ್ರಮುಖ ಆರೋಪಿ  ಇರ್ಫಾನ್ ಖಾನ್‍ನನ್ನು ಶನಿವಾರ ರಾತ್ರಿ ಬಂಧಿಸಿ ರವಿವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು ಆತನಿಗೆ ಜುಲೈ 7ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಖಾನ್‍ನನ್ನು ನಾಗ್ಪುರ್ ನಿಂದ ಬಂಧಿಸಲಾಗಿದ್ದು ಆತ ಪಠಾನ್ ಚೌಕ್‍ನಲ್ಲಿರುವ ಚೌಲ್ ಒಂದರ ನಿವಾಸಿಯಾಗಿದ್ದಾನೆ. ಇತರ ಐದು ಮಂದಿಯೊಂದಿಗೆ ಆತ ಕೊಲೆ ಷಡ್ಯಂತ್ರ ರೂಪಿಸಿದ್ದು  ಇತರ ಆರೋಪಿಗಳಿಗೆ ಕೃತ್ಯ ಸಂದರ್ಭ ವಿವಿಧ ಕಾರ್ಯ ವಹಿಸಿದ್ದ. ವಾಹನ ಮತ್ತು ಹಣದ ಏರ್ಪಾಟು ಕೂಡ  ಆತ ಮಾಡಿದ್ದ. ಎಲ್ಲಾ ಆರೋಪಿಗಳೂ  ಸ್ನೇಹಿತರಾಗಿದ್ದು ಪ್ರಧಾನ ಆರೋಪಿ ತನ್ನ ರಹೇಬರ್ ಸಹಾಯವಾಣಿ ಮೂಲಕ ನಡೆಸುತ್ತಿದ್ದ ಕಾರ್ಯಕ್ಕೆ ಕೈಜೋಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರನೇ ಆರೋಪಿ ಯೂಸುಫ್ ಖಾನ್ ಓರ್ವ ಪಶುವೈದ್ಯನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News