ಆಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಹಿರಿಯ ಶಿಕ್ಷಕರ ನೇಮಕಾತಿಗೆ ಆದೇಶ!

Update: 2022-07-05 03:57 GMT

ಬೆಂಗಳೂರು, ಜು.4: ಸರಕಾರಿ ಪ್ರಾಥಮಿಕ ಶಾಲೆಗಳ ಹಿರಿಯ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಹಲವು ಅಭ್ಯರ್ಥಿಗಳಿಗೆ ವಾಮಮಾರ್ಗದಲ್ಲಿ ನೇಮಕ ಆದೇಶ ನೀಡಿ ಅಕ್ರಮ ಎಸಗಿರುವ ಪ್ರಕರಣವೊಂದನ್ನು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಹೊರಗೆಡವಿದೆ.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ದೊಡ್ಡ ಸದ್ದು ಮಾಡಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆಯಲ್ಲಿಯೂ ಸದ್ದಿಲ್ಲದೇ ನಡೆದಿದೆ ಎನ್ನಲಾಗಿರುವ ಅಕ್ರಮವೊಂದು ಮುನ್ನೆಲೆಗೆ ಬಂದಿದೆ.

ತುಮಕೂರು ಜಿಲ್ಲೆಯ ಕುಣಿಗಲ್, ಗುಬ್ಬಿ, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧೆಡೆ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಹೆಸರುಗಳು ಮತ್ತು ಅಕ್ರಮ ಹೇಗೆಲ್ಲಾ ನಡೆದಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಈ ಸಂಬಂಧ ಮುಖ್ಯಮಂತ್ರಿ, ಸಚಿವ ಬಿ.ಸಿ. ನಾಗೇಶ್, ಸರಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರವೊಂದನ್ನು ೨೦೨೨ರ ಜುಲೈ ೪ರಂದು ಬರೆದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ ಹಿರಿಯ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಮತ್ತು ಕಂಡು ಕೇಳರಿಯದಂತಹ ಅಕ್ರಮಗಳು ಕಳೆದ ಹಲವು ವರ್ಷಗಳಿಂದಲೂ ನಡೆದಿವೆ. ಇದೇ ರೀತಿಯ ಅಕ್ರಮವು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವ ಅಭ್ಯರ್ಥಿಗಳಿಗೂ ಅಕ್ರಮವಾಗಿ ನೇಮಕಾತಿ ಪತ್ರ ನೀಡುವ ಮೂಲಕ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಸರಕಾರದ ಗಮನಕ್ಕೆ ಪ್ರಾಥಮಿಕ ಮಾಹಿತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್. ಮಲ್ಲಿಕಾರ್ಜುನಯ್ಯ ಅವರು ಪತ್ರದಲ್ಲಿ ಒದಗಿಸಿದ್ದಾರೆ.

ಬೆಂಗಳೂರು ವಿಭಾಗದಲ್ಲಿ ಇಂತಹದೊಂದು ಪ್ರಕರಣ ನಡೆದಿದೆ ಎಂದು ಶಂಕಿಸಿರುವ ವೇದಿಕೆಯು ಈ ಪ್ರಕರಣವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಗಮನಕ್ಕೆ ಬಂದಿಲ್ಲ.

ಅಥವಾ ಅವರನ್ನೂ ಕತ್ತಲಲ್ಲಿ ಇರಿಸಲಾಗಿದೆ. ಹಾಗೆಯೇ ಈ ಪ್ರಕರಣವು ಗೊತ್ತಿದ್ದೂ ಸುಮ್ಮನಿರುವ ಮೂಲಕ ಅಕ್ರಮಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೋ ಎಂಬುದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ನವೀನ್ ಕುಮಾರ್ ಬಿ.ಎನ್.ಸಹ ಶಿಕ್ಷಕರು (ಕೆ.ಪಿ.ಎಸ್ ಅಮೃತೂರು, ಕುಣಿಗಲ್ ತಾಲೂಕು ಸಿದ್ರಾಮಪ್ಪ ಬಿರಾದಾರ ಸಹ ಶಿಕ್ಷಕರು (ಹತ್ತಳ್ಳಿ ಹಿರಿಯ ಪ್ರಾಥಮಿಕ ಶಾಲೆ,ವಿಜಯಪುರ ಜಿಲ್ಲೆಯ ಚಡಚಣ ತಾಲೂಕು), ಮಹೇಶ್ ಸುಸಲಾದಿ ಸಹ ಶಿಕ್ಷಕರು, (ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ) , ದೇವೇಂದ್ರ ನಾಯಕ ಸಹ ಶಿಕ್ಷಕರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.

ಈ ಅಭ್ಯರ್ಥಿಗಳೆಲ್ಲ ಈ ಹಿಂದೆ ೨೦೧೪-೧೫ರ ಸಾಲಿನಲ್ಲಿ ಪ್ರಾಥಮಿಕ ಹಾಗೂ ಹಿರಿಯ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇವರುಗಳು ಬೆಂಗಳೂರು ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ಇವರ ಹೆಸರು ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ. ಬೆಂಗಳೂರು ವಿಭಾಗದ ಸಹ ನಿರ್ದೇಶಕರಾಗಿದ್ದ ಡಿ.ಕೆ. ಶಿವಕುಮಾರ್ (ಈಗ ನಿವೃತ್ತ) ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಇವರು ಅಕ್ರಮ ನೇಮಕಕ್ಕೆ ಸಹಕರಿಸುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಬಿಜಾಪುರ ಮೂಲದ ರಾಚಯ್ಯ ಹಿರೇಮಠ, ಇವರು ಮಧ್ಯವರ್ತಿಯಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಅಕ್ರಮವನ್ನು ಅನಾವರಣಗೊಳಿಸಿದ ವೇದಿಕೆ

ನೇಮಕಾತಿ ಸಂಬಂಧ ಮೊದಲು ಪ್ರಕಟಿಸುವ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇರುವುದಿಲ್ಲ. ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಯ್ಕೆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳು ಯಾವುದೋ ಕಾರಣದಿಂದ ಕೆಲಸಕ್ಕೆ ಹಾಜರಾಗದೇ ಇರುವ ಕಾರಣಕ್ಕೆ ಈ ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಖಾಲಿಯಾದ ಹುದ್ದೆಗಳಿಗೆ ಇವರು cut of percentage ಇರುವ ಅಭ್ಯರ್ಥಿಗಳನ್ನು ಪಟ್ಟಿಮಾಡಿ ನೇಮಕ ಮಾಡಿಕೊಳ್ಳದೇ ನೇಮಕಾತಿಯನ್ನು ಮುಂದೂಡುತ್ತಾರೆ. ಇದು ವರ್ಷಗಟ್ಟಲೇ ಹೀಗೆಯೇ ಮುಂದುವರೆಯುತ್ತದೆ ಎಂದು ವೇದಿಕೆಯು ಪತ್ರದಲ್ಲಿ ವಿವರಿಸಿದೆ.

ಆ ನಂತರದ ದಿನಗಳಲ್ಲಿ ಹಿಂದೆ ನಡೆದಿದ್ದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಈ ಜಾಲವು ಸಂಪರ್ಕಿಸುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಲು ನಿಗದಿತ ಅಂಕಗಳು ಪಡೆಯದಿದ್ದರೂ ಲಕ್ಷಾಂತರ ರುಪಾಯಿ ಲಂಚ ಪಡೆದು ಇವರಿಗೆ ಮೂಲ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವೆರಿಫಿಕೇಶನ್ ಪತ್ರ ಕಳಿಸಿಕೊಟ್ಟಿದ್ದಾರೆ. ಆ ನಂತರ ಮೇಲಾಧಿಕಾರಿಗಳ ಗಮನಕ್ಕೆ ತರದೆಯೇ ನೇಮಕಾತಿ ಆದೇಶ ನೀಡಿದ್ದಾರೆ ಎಂದು ವೇದಿಕೆಯು ಪತ್ರದಲ್ಲಿ ಆರೋಪಿಸಿದೆ.

ಇದಾದ ನಂತರ ಖಾಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ನೇಮಕಾತಿ ಆದೇಶ ನೀಡಿದ್ದಾರೆ. ಆದರೆ ನೇಮಕಾತಿ ನಿಯಮದ ಪ್ರಕಾರ ಮೊದಲನೇ ಆಯ್ಕೆ ಪಟ್ಟಿಯಲ್ಲಿ ನೇಮಕಾತಿ ಆಗದಿರುವ ಅಭ್ಯರ್ಥಿಗಳಿಗೆ ಕಟ್ ಆಫ್ ಪರ್ಸೆಂಟೇಜ್ ಎಷ್ಟಕ್ಕೆ ನಿಲ್ಲಿಸಲಾಗಿದೆಯೋ ಅದರ ಕೆಳಗಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಈ ಎರಡನೇ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ನೇಮಕಾತಿ ಆದೇಶ ನೀಡಬೇಕು. ಇಲ್ಲದಿದ್ದರೆ ಖಾಲಿ ಹುದ್ದೆಗಳನ್ನು ಸರಕಾರಕ್ಕೆ ಮರು ಹಿಂದಿರುಗಿಸಬೇಕು. ಆದರೆ ಇಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಹಣ ಪಡೆದು ಅಕ್ರಮವಾಗಿ ನೇಮಕ ನಡೆಸಲಾಗಿದೆ ಎಂದು ವೇದಿಕೆಯು ಆಪಾದಿಸಿದೆ.

ಈ ರೀತಿಯಾಗಿ ನೂರಾರು ಜನ ಅಭ್ಯರ್ಥಿಗಳಿಗೆ ಅಕ್ರಮವಾಗಿ ನೇಮಕಾತಿ ಆದೇಶ ಪ್ರತಿ ನೀಡಿ ಅಕ್ರಮ ನಡಸಲಾಗಿದೆ. ಇಡೀ ಪ್ರಕರಣೆದ ಕುರಿತು ಬೆಂಗಳೂರು ವಿಭಾಗದ ಸಹ ನಿರ್ದೇಶಕ ಡಿಕೆ ಶಿವಕುಮಾರ್ ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಇವರನ್ನು ತನಿಖೆಗೊಳಪಡಿಸಬೇಕು ಎಂದು ಪತ್ರದಲ್ಲಿ ವೇದಿಕೆಯು ಒತ್ತಾಯಿಸಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News