ಮುಂಬೈ , ಉಪನಗರಗಳಲ್ಲಿ ಭಾರೀ ಮಳೆ, ಕೆಲವು ಪ್ರದೇಶಗಳಲ್ಲಿ ಜಲಾವೃತ
ಮುಂಬೈ: ಕಳೆದ ರಾತ್ರಿ ಹಾಗೂ ಇಂದು ಮುಂಜಾನೆ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರೀ ಮಳೆ ಸುರಿದ ಕಾರಣ, ನಗರದ ಕೆಲವು ಭಾಗಗಳು ಜಲಾವೃತವಾಗಿದ್ದು, ಭಾರೀ ಟ್ರಾಫಿಕ್ ಕಂಡುಬಂದಿದೆ. ನಿವಾಸಿಗಳು ಪರದಾಟ ನಡೆಸಿದರು ಎಂದು NDTV ವರದಿ ಮಾಡಿದೆ.
ಸಯನ್‌ನ ರಸ್ತೆಗಳು ನೀರಿನಿಂದ ತುಂಬಿರುವ ಚಿತ್ರವನ್ನು ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ. ಉಪ ನಗರ ಅಂಧೇರಿಯಲ್ಲೂ ಜನರು ಮೊಣಕಾಲು ತನಕ ನಿಂತಿದ್ದ ನೀರಿನಲ್ಲಿ ನಡೆದಾಡುತ್ತಿರುವುದು ಕಂಡುಬಂದಿತು.
ತಗ್ಗು ಪ್ರದೇಶಗಳು ಹಾಗೂ ರೈಲ್ವೆ ಹಳಿಗಳಲ್ಲಿ ನೀರು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ ರೈಲು ಹಾಗೂ ಬಸ್ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬೈ ಮತ್ತು ಅದರ ಉಪನಗರಗಳಲ್ಲಿ "ಮಧ್ಯಮದಿಂದ ಭಾರೀ ಮಳೆ" ಮತ್ತು ಮುಂದಿನ ಕೆಲವು ದಿನಗಳವರೆಗೆ ಪ್ರತ್ಯೇಕ ಸ್ಥಳಗಳಲ್ಲಿ " ಭಾರೀ" ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಂಬೈ ಹಾಗೂ ನೆರೆಯ ಜಿಲ್ಲೆಗಳ ಅಧಿಕಾರಿಗಳಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.
"ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಿಎಂ ಏಕನಾಥ್ ಶಿಂಧೆ ಅವರು ಮುಖ್ಯ ಕಾರ್ಯದರ್ಶಿ ಮನುಕುಮಾರ್ ಶ್ರೀವಾಸ್ತವ ಅವರೊಂದಿಗೆ ಚರ್ಚೆ ನಡೆಸಿದರು. ಎಲ್ಲಾ ಸಂಬಂಧಿತ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನಿಗಾ ಇರಿಸಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಚಿಸಿದ್ದಾರೆ" ಎಂದು ಸಿಎಂ ಕಚೇರಿ ಟ್ವೀಟ್ ಮಾಡಿದೆ.
ಘಾಟ್ ಕೋಪರ್, ಚಿಪ್ಲುನ್ ನಲ್ಲಿ ಭೂಕುಸಿತ
ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿಯೂ ಭಾರಿ ಮಳೆಯಾಗುತ್ತಿರುವುದರಿಂದ, ಉಪನಗರ ಘಾಟ್‌ಕೋಪರ್ ಹಾಗೂ ಮುಂಬೈನಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ಭೂಕುಸಿತಗಳು ಸಂಭವಿಸಿರುವ ಕುರಿತಂತೆ ವರದಿಯಾಗಿವೆ.
#WATCH | Maharashtra: Sion area of Mumbai witnessed waterlogging in the wake of heavy rains in the city. Visuals from last night. pic.twitter.com/tjniUJ74RE
— ANI (@ANI) July 5, 2022